ADVERTISEMENT

ಉತ್ತರಕನ್ನಡ: ಪ್ರಧಾನ ಮಂತ್ರಿ ಕೌಶಲ ಕೇಂದ್ರ ಭಣ ಭಣ

ವಿದ್ಯಾರ್ಥಿಗಳಿಲ್ಲದೇ ಬಾಗಿಲು ಮುಚ್ಚಿರುವ ತರಬೇತಿ ಕೊಠಡಿಗಳು

ಸಂಧ್ಯಾ ಹೆಗಡೆ
Published 1 ಜುಲೈ 2019, 19:45 IST
Last Updated 1 ಜುಲೈ 2019, 19:45 IST
ಶಿರಸಿ ತಾಲ್ಲೂಕಿನ ಯಡಳ್ಳಿಯಲ್ಲಿರುವ ಪಿಎಂ ಕೌಶಲ ಕೇಂದ್ರ
ಶಿರಸಿ ತಾಲ್ಲೂಕಿನ ಯಡಳ್ಳಿಯಲ್ಲಿರುವ ಪಿಎಂ ಕೌಶಲ ಕೇಂದ್ರ   

ಶಿರಸಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೌಶಲ ಭಾರತ ಕೇಂದ್ರ ಯೋಜನೆಯಡಿ ತಾಲ್ಲೂಕಿನ ಯಡಳ್ಳಿಯಲ್ಲಿ ಪ್ರಾರಂಭವಾಗಿದ್ದ ಪ್ರಧಾನಮಂತ್ರಿ ಕೌಶಲ ಕೇಂದ್ರವು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದೆ.

ಜಿಲ್ಲೆಯಲ್ಲಿರುವ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡುವ ಮೂಲಕ ಉದ್ಯೋಗ ಕಲ್ಪಿಸುವುದು ಕೇಂದ್ರದ ಪ್ರಮುಖ ಗುರಿಯಾಗಿತ್ತು. 2017 ಸೆಪ್ಟೆಂಬರ್‌ನಲ್ಲಿ ಆಗಿನ ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಕೇಂದ್ರವನ್ನು ಉದ್ಘಾಟಿಸಿದ್ದರು. ಆರಂಭವಾದ ಹೊತ್ತಿಗೆ ಅನೇಕ ನಿರುದ್ಯೋಗಿ ಯುವಜನರು ಕೇಂದ್ರಕ್ಕೆ ಸೇರಿ, ಮೊಬೈಲ್‌ ದುರಸ್ತಿ, ಕಂಪ್ಯೂಟರ್ ತರಬೇತಿ, ವಾಹನ ಚಾಲನಾ ತರಬೇತಿ ಪಡೆದಿದ್ದರು. ಒಬ್ಬ ವಿದ್ಯಾರ್ಥಿಯೂ ಇಲ್ಲದ ಕೇಂದ್ರದ ಪ್ರಸ್ತುತ ಸ್ಥಿತಿ ಮರುಕ ಹುಟ್ಟಿಸುವಂತಿದೆ. ದೂಳು ಆವರಿಸಿರುವ ಕೊಠಡಿಯಲ್ಲಿ ಕಸ ರಾಶಿ ಬಿದ್ದಿದೆ. ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿವೆ.

ಒಂದೂವರೆ ವರ್ಷದ ಹಿಂದೆ, ಯಡಳ್ಳಿ ಶಿಕ್ಷಣ ಸಂಸ್ಥೆಯ ಕಟ್ಟಡವನ್ನು ಐದು ವರ್ಷಗಳ ಲೀಸಿಗೆ ಪಡೆದು, ಪ್ರೌಢಶಾಲೆ, ಪಿಯು ಕಾಲೇಜಿನ ಕಟ್ಟಡದ ಮುಂಭಾಗವನ್ನು ಕೌಶಲ ಕೇಂದ್ರದ ಮಾದರಿಯಂತೆ ವಿನ್ಯಾಸಗೊಳಿಸಲಾಗಿತ್ತು. ಆದರೆ, ಕೇಂದ್ರಕ್ಕೆ ಸುರಿದ ಹಣ ನಿರರ್ಥಕವಾಗಿದೆ. ನಾಲ್ಕೈದು ಸಿಬ್ಬಂದಿ ಹೊರತುಪಡಿಸಿದರೆ, ಇಲ್ಲಿ ಒಬ್ಬ ವಿದ್ಯಾರ್ಥಿಯೂ ಬರುತ್ತಿಲ್ಲ. ‘ಒಂದು ವರ್ಷದಲ್ಲಿ ಸುಮಾರು 700 ಜನರು ತರಬೇತಿ ಪಡೆದಿದ್ದಾರೆ’ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ADVERTISEMENT

‘ಉದ್ಯೋಗ ನೀಡುವ ಭರವಸೆಯ ಮೇಲೆ ತರಬೇತಿ ನೀಡಲಾಗಿತ್ತು. ಆದರೆ, ತರಬೇತಿ ಪಡೆದ ಬಹುತೇಕರು ಇನ್ನೂ ನಿರುದ್ಯೋಗಿಗಳಾಗಿಯೇ ಇದ್ದಾರೆ. ಕೆಲವರಿಗಾದರೂ ಉದ್ಯೋಗ ಕೊಡಿಸಿದ್ದರೆ ನೀಡಿದ ಭರವಸೆಗೆ ಅರ್ಥವಿರುತ್ತಿತ್ತು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು.

‘ಕೇಂದ್ರ ಸಚಿವರಾಗಿದ್ದಾಗ ಉತ್ಸಾಹದಿಂದ ಉದ್ಘಾಟಿಸಿದ್ದ ಕೇಂದ್ರ ಈಗ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ. ಈಗ ಸಚಿವ ಸ್ಥಾನ ಇಲ್ಲದಿದ್ದರೂ, ಸಂಸದರಾಗಿ ಮತ್ತೊಮ್ಮೆ ಆಯ್ಕೆಯಾಗಿರುವ ಅನಂತಕುಮಾರ್ ಹೆಗಡೆ ಇತ್ತ ಗಮನಹರಿಸಿ, ಕೇಂದ್ರಕ್ಕೆ ಜೀವ ತುಂಬಬೇಕು’ ಎಂದು ಅವರು ಒತ್ತಾಯಿಸಿದರು.

‘ತಾಲ್ಲೂಕು ಕೇಂದ್ರದಿಂದ ಆರು ಕಿ.ಮೀ ದೂರವಿರುವ ಕಾರಣಕ್ಕೆ ಜನರು ಬರುತ್ತಿಲ್ಲ. ಈ ಸಂಗತಿಯನ್ನು ಮುಂದಿಟ್ಟು ಕೇಂದ್ರವನ್ನು ಸ್ಥಳಾಂತರಗೊಳಿಸುವ ಯೋಚನೆ ನಡೆದಿದೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.