ADVERTISEMENT

ಸರಣಿ ಕಳವು ಆರೋಪಿಗಳ ಬಂಧನ: ₹19 ಲಕ್ಷ ಮೌಲ್ಯದ ಸ್ವತ್ತು ಜಪ್ತಿ

ಗೋಕರ್ಣ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 13:10 IST
Last Updated 28 ಜೂನ್ 2021, 13:10 IST
ಜಿಲ್ಲೆಯಾದ್ಯಂತ ಕಳವು ನಡೆಸಿದ ಆರೋಪಿಗಳನ್ನು ಗೋಕರ್ಣದ ಪೊಲೀಸರು ಬಂಧಿಸಿರುವುದು ಮತ್ತು ಅವರಿಂದ ವಶಪಡಿಸಿಕೊಂಡ ಸ್ವತ್ತುಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಭಟ್ಕಳ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ ಕೆ.ಯು ಚಿತ್ರದಲ್ಲಿದ್ದಾರೆ.
ಜಿಲ್ಲೆಯಾದ್ಯಂತ ಕಳವು ನಡೆಸಿದ ಆರೋಪಿಗಳನ್ನು ಗೋಕರ್ಣದ ಪೊಲೀಸರು ಬಂಧಿಸಿರುವುದು ಮತ್ತು ಅವರಿಂದ ವಶಪಡಿಸಿಕೊಂಡ ಸ್ವತ್ತುಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಭಟ್ಕಳ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ ಕೆ.ಯು ಚಿತ್ರದಲ್ಲಿದ್ದಾರೆ.   

ಗೋಕರ್ಣ: ಒಂದು ವರ್ಷದಲ್ಲಿ ಗೋಕರ್ಣ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕಿನ ವಿವಿಧೆಡೆ ನಡೆದ ಸರಣಿ ಕಳವಿಗೆ ಸಂಬಂಧಿಸಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಐ.ಟಿ.ಐ ಪದವೀಧರರಾಗಿದ್ದು, ಸಹಪಾಠಿಗಳಾಗಿದ್ದರು.

ಕಳವು ಮಾಡಿದ ವಸ್ತುಗಳನ್ನು ಆರೋಪಿಗಳಿಂದ ಸ್ವೀಕರಿಸುತ್ತಿದ್ದ ಒಬ್ಬರನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿಗಳಿಂದ ₹ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಗೋಕರ್ಣದಲ್ಲಿ ಸೋಮವಾರ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ‘ಅಂಕೋಲಾದ ಬಬ್ರುವಾಡದ ಪ್ರಶಾಂತ ಕಿಶೋರ ನಾಯ್ಕ (23), ತೆಂಕಣಕೇರಿಯ ಹರ್ಷಾ ನಾಗೇಂದ್ರ ನಾಯ್ಕ (22), ಶಿರಸಿಯ ಕಸ್ತೂರಬಾ ನಗರದ ಶ್ರೀಕಾಂತ ಗಣಪತಿ ದೇವಾಡಿಗ ( 27), ನಿಹಾಲ್ ಗೋಪಾಲಕೃಷ್ಣ ದೇವಳಿ (26), ಶಿರಸಿ ಲಂಡಕನಳ್ಳಿಯ ಸಂದೀಪ ಹನುಮಂತ ಮರಾಠೆ (25), ಅಂಕೋಲಾ ಶಿರಕುಳಿಯ ಗಣೇಶ ಮಾರುತಿ ನಾಯ್ಕ (24), ಕೇಣಿಯ ರಾಹುಲ್ ಕೃಷ್ಣಾನಂದ ಬಂಟ್ (22) ಹಾಗೂ ಇವರು ಕದ್ದ ಮಾಲನ್ನು ಸ್ವೀಕರಿಸುತ್ತಿದ್ದ ಶಿರಸಿಯ ಅರೆಕೊಪ್ಪ ನಿವಾಸಿ ಅಶೋಕ ಗಣಪತಿ ರಾಯ್ಕರ್ (42) ಬಂಧಿತರು’ ಎಂದು ತಿಳಿಸಿದ್ದಾರೆ.

ADVERTISEMENT

18 ಪ್ರಕರಣಗಳಲ್ಲಿ ಭಾಗಿ:

ಆರೋಪಿಗಳು ಗೋಕರ್ಣ ಠಾಣೆ ವ್ಯಾಪ್ತಿಯಲ್ಲಿ ಐದು, ಅಂಕೋಲಾ ವ್ಯಾಪ್ತಿಯಲ್ಲಿ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಸೇರಿದಂತೆ ಒಟ್ಟು 18 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನವಿದೆ.

ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಎಲ್ಲ ಪ್ರಕರಣಗಳನ್ನೂ ಭೇಧಿಸಿದ್ದಾರೆ. ಆರೋಪಿಗಳಿಂದ 351 ಗ್ರಾಂ ಬಂಗಾರದ ಆಭರಣಗಳು, ಒಂದು ಕೆ.ಜಿ. ಬೆಳ್ಳಿಯ ಆಭರಣ, ಐದು ಗ್ಯಾಸ್ ಸಿಲೆಂಡರ್‌ಗಳು, ಒಂದು ಏರ್‌ಗನ್, ಮೂರು ಬೈಕ್‌ಗಳು ಹಾಗೂ ಎಂಟು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳ ಬಂಧನಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದ್ರೀನಾಥ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಲಾಗಿತ್ತು. ಭಟ್ಕಳ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ಶಿವಪ್ರಕಾಶ ನಾಯ್ಕ, ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ, ಅಂಕೋಲಾ ಪಿ.ಎಸ್.ಐ ಪ್ರವೀಣಕುಮಾರ್, ಗೋಕರ್ಣ ಠಾಣೆಯ ಹಲವು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಎ.ಎಸ್.ಐ ಅರವಿಂದ ಶೆಟ್ಟಿ, ಎ.ಎಸ್.ಐ ನಾರಾಯಣ ಗುನಗಿ, ಸಿಬ್ಬಂದಿಯಾದ ರಾಜೇಶ ನಾಯ್ಕ, ಸಚಿನ್ ನಾಯ್ಕ, ಗೋರಕನಾಥ ರಾಣೆ, ಕಿರಣಕುಮಾರ್ ಬಾಳುರ, ನಾಗರಾಜ ಪಟಗಾರ, ರಾಜು ನಾಯ್ಕ, ಅರುಣ ನಾಯ್ಕ, ನಾಗರಾಜ ನಾಯ್ಕ, ವಿನಯ ಗೌಡ, ಜಗದೀಶ ನಾಯಕ, ಅನುರಾಜ ನಾಯ್ಕ, ಶಿವಾನಂದ ಗೌಡ, ಅರುಣ ಮುಕ್ಕಣ್ಣನವರ, ವಸಂತ ನಾಯ್ಕ, ಅಮಿತ್ ಸಾವಂತ, ರವಿ ಹಾಡಕರ, ಸಂಜೀವ ನಾಯ್ಕ, ಮಹೇಶ ನಾಯ್ಕ, ಮತ್ತು ಅಂಕೋಲಾ ಠಾಣೆಯ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕೆ. ಹಾಗೂ ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ ರಮೇಶ ನಾಯ್ಕ, ಸುಧೀರ್ ಮಡಿವಾಳ ಪಾಲ್ಗೊಂಡಿದ್ದರು.

ನಾಗರಿಕರ ನೆಮ್ಮದಿ ಕೆಡಿಸಿದ್ದ ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ಶ್ರಮಿಸಿ ಯಶಸ್ವಿಯಾದ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿದ್ದ ಎಲ್ಲರಿಗೂ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.