ADVERTISEMENT

ಉತ್ತರ ಕನ್ನಡ ಜಿಲ್ಲೆಯ ಪ್ರತಿ ಠಾಣೆಯಲ್ಲಿ ಸಹಾಯವಾಣಿ

ಎಸ್ಪಿ ಶಿವಪ್ರಕಾಶ ದೇವರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 13:28 IST
Last Updated 28 ಮೇ 2020, 13:28 IST
ಶಿರಸಿ ನಗರ ಠಾಣೆಯ ಹೊರ ಆವರಣದಲ್ಲಿ ಪ್ರಾರಂಭಿಸಿರುವ ಸಹಾಯವಾಣಿ ವ್ಯವಸ್ಥೆಯನ್ನು ಎಸ್ಪಿ ಶಿವಪ್ರಕಾಶ ದೇವರಾಜು ಪರಿಶೀಲಿಸಿದರು
ಶಿರಸಿ ನಗರ ಠಾಣೆಯ ಹೊರ ಆವರಣದಲ್ಲಿ ಪ್ರಾರಂಭಿಸಿರುವ ಸಹಾಯವಾಣಿ ವ್ಯವಸ್ಥೆಯನ್ನು ಎಸ್ಪಿ ಶಿವಪ್ರಕಾಶ ದೇವರಾಜು ಪರಿಶೀಲಿಸಿದರು   

ಶಿರಸಿ: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆಯಾಗಿ ಪ್ರತಿ ಪೊಲೀಸ್ ಠಾಣೆಯ ಎದುರು ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಡುಪಿ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಕೋವಿಡ್ 19 ಸೋಂಕು ತಗುಲಿದೆ. ಹೀಗಾಗಿ, ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಠಾಣೆಗಳು ಚಿಕ್ಕದಾಗಿರುವ ಕಾರಣ, ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಅದಕ್ಕಾಗಿ ಠಾಣೆಯ ಹೊರಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

ಸಹಾಯವಾಣಿಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳಲು ಬಂದಾಗ ಕಡ್ಡಾಯವಾಗಿ ನಿರ್ದಿಷ್ಟ ಅಂತರ ಕಾಪಾಡಿಕೊಂಡು ಮಾತನಾಡಬೇಕು. ಠಾಣೆಗೆ ಭೇಟಿ ನೀಡುವವರು ಮುಖಗವಸು ಮತ್ತು ಕೈಗವಸು ಧರಿಸಬೇಕು. ಠಾಣೆಯ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಕೊರೊನಾ ಕರ್ತವ್ಯದಲ್ಲಿರುವ ಪೊಲೀಸರಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಇಂತಹವರಿಗೆ ಪಿಪಿಇ ಕಿಟ್ ಹಾಕಲು ಸೂಚಿಸಲಾಗಿದೆ. ಕುಟುಂಬದ ಜತೆಗೂ ಸಂಪರ್ಕ ಹೊಂದದಂತೆ ಹೇಳಲಾಗಿದೆ. ಸೋಂಕಿನಿಂದ ಕಾಪಾಡಿಕೊಳ್ಳಲು ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರತಿ ಠಾಣೆಯಲ್ಲಿ ಶೇ 50ರಷ್ಟು ಸಿಬ್ಬಂದಿಯನ್ನು ಕೊರೊನಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. 10 ದಿನಗಳಿಗೊಮ್ಮೆ ಸಿಬ್ಬಂದಿ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಡಿವೈಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ ಬಿ.ಯು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.