ADVERTISEMENT

ಐ.ಆರ್.ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು: ಆರೋಪ

ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 13:52 IST
Last Updated 9 ಡಿಸೆಂಬರ್ 2024, 13:52 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಕಾರವಾರ: ‘ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಲು ಕಾರಣರಾದ ಐ.ಆರ್.ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಅಂಕೋಲಾ ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶಿಸಿದರೂ ಪೊಲೀಸರು ಹಿಂದೇಟು ಹಾಕುತ್ತಿರುವ ಕಾರಣಕ್ಕೆ ಹೈಕೋರ್ಟ್ ಮೊರೆ ಹೋಗಲಿದ್ದೇವೆ’ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು‌.

‘ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬ ಆಗುತ್ತಿರುವುದರ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಗಳ ಒತ್ತಡ ಇರಬಹುದು ಎಂಬ ಶಂಕೆ ಇದೆ’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ದುರಂತದಲ್ಲಿ ಕಣ್ಮರೆಯಾದ ಜಗನ್ನಾಥ, ಲೋಕೇಶ ಅವರ ಪತ್ತೆ ಈ ತನಕವೂ ಆಗಿಲ್ಲ. ಮೂಳೆಯ ತುಂಡೊಂದು ಪತ್ತೆಯಾಗಿ ಮೂರು ತಿಂಗಳು ಕಳೆದರೂ ಈವರೆಗೆ ಡಿಎನ್‍ಎ ಪರೀಕ್ಷೆ ವರದಿ ಬಾರದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯ’ ಎಂದರು.

ADVERTISEMENT

‘ದುರಂತ ನಡೆದು ಐದು ತಿಂಗಳು ಕಳೆದರೂ ಶಾಸಕ ಸತೀಶ ಸೈಲ್ ಈವರೆಗೂ ಸಂತ್ರಸ್ತ ಜಗನ್ನಾಥ, ಲೋಕೇಶ ಅವರ ಮನೆಗೆ ಭೇಟಿ ನೀಡಿಲ್ಲ. ನಾಮಧಾರಿ ಸಮುದಾಯದಲ್ಲೇ ಒಡಕು ಮೂಡಿಸಲು ಅವರು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರದಿಂದ ನಾಲ್ವರಿಗೆ ತಲಾ ₹2 ಲಕ್ಷ ಪರಿಹಾರ ಬಿಡುಗಡೆಯಾಗಿದೆ. ಜಗನ್ನಾಥ, ಲೋಕೇಶ ಕುಟುಂಬಕ್ಕೆ ಪರಿಹಾರ ಬಿಡುಗಡೆ ಬಾಕಿ ಇದೆ’ ಎಂದರು.

‘ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಅನುದಾನ ನೀಡದ ರಾಜ್ಯ ಸರ್ಕಾರದ ವಿರುದ್ದ ಡಿ.17 ರಂದು ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದರು.

ಮಂಡಳಿಯ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ನಾಯ್ಕ, ದಾಮೋದರ ನಾಯ್ಕ, ಶ್ರೀಧರ ನಾಯ್ಕ, ರಾಜೇಶ ನಾಯ್ಕ, ಮನಿಶಾ ನಾಯ್ಕ, ವಿನೋದ ನಾಯ್ಕ, ಶ್ರೀನಿವಾಸ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.