ADVERTISEMENT

ವಿಧಾನ ಸಭಾಧ್ಯಕ್ಷರ ಅವಹೇಳನ: ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 17:02 IST
Last Updated 17 ಸೆಪ್ಟೆಂಬರ್ 2022, 17:02 IST
   

ಹೊನ್ನಾವರ: ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ ಆರೋಪಿಯನ್ನು ಇಲ್ಲಿನ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಹಳದೀಪುರ ಬಡಗಣಿಯ ನಿವಾಸಿ, ಗಾರೆ ಕೆಲಸ ಮಾಡುವ ಗಣೇಶ ಶಂಕರ ಗೌಡ (27) ಬಂಧಿತ ಆರೋಪಿ.

‘ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸಂಬಂಧಿಸಿಕಾರವಾರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಡುವೆ ಕಲಾಪದಲ್ಲಿ ಸಂಭಾಷಣೆ ನಡೆದಿತ್ತು. ಅದನ್ನು ಫೇಸ್‌ಬುಕ್‌ನ ‘ನಮ್ಮ ಯುಕೆ’ ಗ್ರೂಪ್‌ನಲ್ಲಿ ಎ.ಜೆ ಅಶೋಕ ಎನ್ನುವವರು ಜನಸಾಮಾನ್ಯರು ಪ್ರಚೋದನೆಗೊಳ್ಳುವ ರೀತಿಯಲ್ಲಿ ಸೆ.15ರಂದು ಪ್ರಕಟಿಸಿದ್ದರು. ಅದಕ್ಕೆ ಗಣೇಶ ಗೌಡ ಅವರು ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದರು’ ಎಂದು ಹೊಸಾಕುಳಿ ಮಡಿವಾಳಕೇರಿಯ ವಸಂತ ಈಶ್ವರ ನಾಯ್ಕ ಎಂಬುವವರು ಶುಕ್ರವಾರ ದೂರು ನೀಡಿದ್ದರು.

ADVERTISEMENT

‘ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವಿಧಾನಸಭೆಯ ಸಭಾಧ್ಯಕ್ಷರನ್ನು ಆರೋಪಿಯು ನಿಂದಿಸಿದ್ದಾರೆ. ಅವರ ಅಭಿಮಾನಿಗಳನ್ನು ಕೆರಳಿಸಿ ತಾಲ್ಲೂಕಿನಲ್ಲಿ ಶಾಂತಿ ಭಂಗ ಮಾಡಲು ಯತ್ನಿಸಿದ್ದಾರೆ. ಶಾಂತಿ– ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಜಾಮೀನು ಸಹಿತ ಮುಚ್ಚಳಿಕೆ ಪಡೆದುಕೊಳ್ಳಲು ಆರೋಪಿಯನ್ನು ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎದುರು ಹಾಜರುಪಡಿಸಲಾಗಿದೆ’ ಎಂದು ಪ್ರಕರಣದ ತನಿಖಾಧಿಕಾರಿ ಪಿ.ಎಸ್.ಐ. ಮಂಜೇಶ್ವರ ಚಂದಾವರ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.