ADVERTISEMENT

ಬಿಎಸ್‌ಎನ್‌ಎಲ್ ಕಳಪೆ ಸೇವೆ: ಗ್ರಾಹಕರ ಆಕ್ರೋಶ

ವಾರದಿಂದ ಮುಂದುವರಿದಿರುವ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 14:00 IST
Last Updated 29 ಏಪ್ರಿಲ್ 2019, 14:00 IST
   

ಶಿರಸಿ/ಕಾರವಾರ: ಖಾಸಗಿ ನೆಟ್‌ವರ್ಕ್‌ಗಳ ಪೈಪೋಟಿಯ ನಡುವೆಯೂ ಅಧಿಕ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್‌ ಅತ್ಯಂತ ಕಳಪೆ ಸೇವೆ ನೀಡುತ್ತಿರುವ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಜಿಲ್ಲೆಯಲ್ಲಿ ಸುಮಾರು 5.26 ಲಕ್ಷ ಬಿಎಸ್‌ಎನ್‌ಎಲ್ ಗ್ರಾಹಕರಿದ್ದಾರೆ. ಗ್ರಾಮೀಣ ಭಾಗದ ಬಹುತೇಕರು ಇದೇ ನೆಟ್‌ವರ್ಕ್‌ ಸೌಲಭ್ಯ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದ ಹಲವರು ಅನಿವಾರ್ಯವಾಗಿ ಖಾಸಗಿ ನೆಟ್‌ವರ್ಕ್‌ ಕಡೆಗೆ ಮುಖ ಮಾಡಿದ್ದಾರೆ.

‘ಒಂದು ವಾರದಿಂದ ಬಿಎಸ್‌ಎನ್‌ಎಲ್ ನಮ್ಮ ಸಹನೆಯನ್ನು ಪರೀಕ್ಷಿಸುವ ಸೇವೆ ನೀಡುತ್ತಿದೆ. ಮೊಬೈಲ್ ಹಾಗೂ ಬ್ರಾಡ್‌ಬ್ಯಾಂಡ್ ಎರಡೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಂಪ್ಯೂಟರ್, ಇಂಟರ್‌ನೆಟ್ ಇಲ್ಲದೇ ಯಾವ ಕೆಲಸವೂ ನಡೆಯದು. ಎರಡು ದಿನಗಳಿಂದ ಬಿಎಸ್‌ಎನ್‌ಎಲ್ ನೀಡುತ್ತಿರುವ ಸೇವೆಯಿಂದ ನಿಜಕ್ಕೂ ಬೇಸತ್ತಿದ್ದೇವೆ’ ಎಂದು ಉದ್ಯಮಿಯೊಬ್ಬರು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು 39ಸಾವಿರ ಸ್ಥಿರ ದೂರವಾಣಿ ಸಂಪರ್ಕಗಳಿವೆ. 10ಸಾವಿರದಷ್ಟು ಬ್ರಾಡ್‌ಬ್ಯಾಂಡ್ ಸಂಪರ್ಕಗಳಿವೆ. ಸ್ಥಿರ ದೂರವಾಣಿ ಹಾಳಾಗಿರುವ ಬಗ್ಗೆ ದೂರು ನೀಡಿದರೆ, ದುರಸ್ತಿಗೆ ಬರುವವರೇ ಇಲ್ಲ. ಬ್ರಾಡ್‌ಬ್ಯಾಂಡ್ ಅರ್ಧ ತಾಸು ಕೂಡ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಡಿಎಸ್‌ಎಲ್‌ ಲ್ಯಾಂಪ್ ಸದಾ ಮಿಟುಕುತ್ತಲೇ ಇರುತ್ತದೆ ಎಂಬುದು ಗ್ರಾಹಕರ ದೊಡ್ಡ ಆರೋಪ.

‘ಸರ್ಕಾರಿ ಸ್ವಾಮ್ಯದ ಸಂಸ್ಥೆ ಆಗಿರುವ ಕಾರಣಕ್ಕೆ ನಂಬಿಕೆಯಿಂದ ಈ ನೆಟ್‌ವರ್ಕ್ ಬಳಸುತ್ತಿದ್ದೇವೆ. ಆದರೆ, ಇವರೇ ಅತ್ಯಂತ ಕಳಪೆ ಸೌಲಭ್ಯ ನೀಡುತ್ತಿರುವುದರಿಂದ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಗ್ರಾಹಕರನ್ನು ಕಳೆದುಕೊಳ್ಳುವ ಮೊದಲು ಬಿಎಸ್‌ಎನ್‌ಎಲ್ ಎಚ್ಚೆತ್ತುಕೊಳ್ಳಲಿ’ ಎಂದು ಗ್ರಾಹಕ ಪರಮಾನಂದ ಹೆಗಡೆ ಎಚ್ಚರಿಸಿದರು.

‘ಕಾರವಾರ ಸಮೀಪದ ಸದಾಶಿವಗಡದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ವೇಳೆ ಬಿಎಸ್‌ಎನ್‌ಎಲ್ ಕೇಬಲ್ ತುಂಡಾಗಿತ್ತು. ಒಂದು ಹಾಳಾದರೆ, ಪರ್ಯಾಯವಾಗಿ ಮತ್ತೊಂದು ಕೇಬಲ್ ಇರುತ್ತದೆ. ಆದರೆ, ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಸಂಸ್ಥೆಯ ಯಂತ್ರಗಳು ಎರಡೂ ಕೇಬಲ್‌ಗಳನ್ನು ತುಂಡು ಮಾಡಿದ್ದವು. ಇದರಿಂದ ಇಡೀ ಜಿಲ್ಲೆಯ ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಬಿಎಸ್ಎನ್ಎಲ್ ಸಿಬ್ಬಂದಿ, ಕೇಬಲ್‌ಗಳನ್ನು ಮರು ಜೋಡಿಸಿ ಸಂಪರ್ಕ ನೀಡಿದ್ದಾರೆ’ ಎಂದು ಬಿಎಸ್‌ಎನ್‌ಎಲ್ ಡಿಜಿಎಂ ಬಿ.ಎಸ್.ನಂದಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಾದ್ಯಂತ ಸ್ಥಗಿತ

ಸೋಮವಾರ ಮಧ್ಯಾಹ್ನ 12.30ರಿಂದ 3.45ರವರೆಗೆ ಇಡೀ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸೇವೆ ಸ್ಥಗಿತಗೊಂಡಿತ್ತು. ಇದನ್ನೇ ನಂಬಿಕೊಂಡಿದ್ದ ಗ್ರಾಹಕರು ಹಿಡಿಶಾಪ ಹಾಕಿದರು. ಬಹುತೇಕ ಬ್ಯಾಂಕ್‌ಗಳಲ್ಲಿ ಬಿಎಸ್‌ಎನ್ಎಲ್ ಸಂಪರ್ಕ ಇರುವುದರಿಂದ ಬ್ಯಾಂಕ್‌ಗಳಲ್ಲಿ ಇಂಟರ್‌ನೆಟ್ ಮೂಲಕ ನಡೆಯುವ ಎಲ್ಲ ಚಟುವಟಿಕೆಗಳಿಗೆ ಅಡ್ಡಿಯಾಯಿತು. ಬ್ಯಾಂಕಿಗೆ ಬಂದಿದ್ದ ಗ್ರಾಹಕರು ಪರಡಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.