ಮುಂಡಗೋಡ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ದುರಸ್ತಿ ಮಾಡದ ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು, ಗುಂಡಿಗಳಲ್ಲಿ ತೆಂಗಿನ ಸಸಿ ನೆಟ್ಟು ಮಂಗಳವಾರ ಪ್ರತಿಭಟಿಸಿದರು.
ರಾಜ್ಯ ಹೆದ್ದಾರಿಗಳಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ಬೈಕ್ ಸವಾರರು ನಿತ್ಯವೂ ಬೀಳುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಗುಂಡಿಗಳು ಬಿದ್ದಿದ್ದರೂ ಸಂಬಂಧಿಸಿದ ಇಲಾಖೆಯವರು ತಾತ್ಕಾಲಿಕ ದುರಸ್ತಿ ಕ್ರಮ ಸಹ ಕೈಗೊಂಡಿಲ್ಲ. ಇದರಿಂದ ಗುಂಡಿಗಳು ದಿನೆ ದಿನೇ ದೊಡ್ಡದಾಗುತ್ತ ಬೈಕ್ ಹಾಗೂ ವಾಹನ ಸವಾರರಿಗೆ ಕಂಟಕವಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಶಿರಸಿ- ಮುಂಡಗೋಡ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸಲು ಸಾಹಸ ಪಡಬೇಕಾಗಿದೆ. ತಾಲ್ಲೂಕಿ ಮಳಗಿ, ಕಾತೂರ, ಪಾಳಾ, ಕಾವಲಕೊಪ್ಪ ಕ್ರಾಸ್, ಸಾಲಗಾಂವ, ಜೋಗೇಶ್ವರ್ ಹಳ್ಳ, ಮಹಾಲೆ ಮಿಲ್ ಸನಿಹ ಸೇರಿದಂತೆ ಹಲವೆಡೆ ದೊಡ್ಡ ಗುಂಡಿಗಳು ಬಿದ್ದಿವೆ. ಕಾರು, ಬೈಕ್‌ಗಳು ಈ ಗುಂಡಿಗಳನ್ನು ಪಾರು ಮಾಡಿ ಮುಂದೆ ಹೋಗಲು ಇನ್ನಿಲ್ಲದ ಸಾಹಸ ಮಾಡಬೇಕಾಗಿದೆ. ಜನರ ಜೀವ ಹಾನಿಯಾಗುವ ಮುಂಚೆಯೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಜೆಡಿಎಸ್ ಕ್ಷೇತ್ರಾಧ್ಯಕ್ಷ ಎ.ಎಸ್.ಸಂಗೂರಮಠ ಆಗ್ರಹಿಸಿದರು.
ಸಾಲಗಾಂವ ಗ್ರಾಮದಿಂದ ಮುಂಡಗೋಡ ಪಟ್ಟಣದವರೆಗೆ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಸಸಿ ನೆಡುತ್ತ ಪ್ರತಿಭಟನಾಕಾರರು ಸಾಗಿದರು. ನಂತರ ತಹಶೀಲ್ದಾರ್ ಶಂಕರ ಗೌಡಿ ಅವರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎನ್.ಅಂತೋಜಿ, ವಿನೋದ ಬೆಂಡ್ಲಗಟ್ಟಿ, ಚಂದ್ರಕಾಂತ ಭಂಗಿ, ಮಂಜುನಾಥ ಮಿಠಾಯಿಗಾರ, ಸದಾನಂದ ವೇಷಗಾರ ಇದ್ದರು.
Cut-off box - ಸಾಮಾಜಿಕ ಜಾಲತಾಣದಲ್ಲಿಯೂ ಆಕ್ರೋಶ ತಾಲ್ಲೂಕಿನಲ್ಲಿ ಹದಗೆಟ್ಟಿರುವ ರಸ್ತೆಗಳ ಸ್ಥಿತಿಗತಿಯ ಕುರಿತು ಸಾಮಾಜಿಕ ತಾಣದಲ್ಲಿ ಸಾರ್ವಜನಿಕರು ಗುಂಡಿಗಳ ಚಿತ್ರ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೋಗೇಶ್ವರ ಹಳ್ಳದ ಸನಿಹದ ರಾಜ್ಯ ಹೆದ್ದಾರಿಯಲ್ಲಿ ಸವಾರನೊಬ್ಬ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಇಲ್ಲಿ ಗುಂಡಿಗಳಿವೆ ಎಚ್ಚರಿಕೆಯಿಂದ ಪ್ರಯಾಣಿಸಿ ಎಂದು ಸಂದೇಶ ಹಂಚಿಕೊಂಡಿದ್ದಾರೆ. ‘ಬಿದ್ದಿರುವ ಗುಂಡಿಗಳನ್ನು ಜೆಸಿಬಿಯಿಂದ ಸಮತಟ್ಟು ಮಾಡಿದರೂ ಸಾಕು ಮಳೆಗಾಲ ಮುಗಿಯುವರೆಗೆ ಸವಾರರು ಸಾವಧಾನದಿಂದ ಪ್ರಯಾಣಿಸುತ್ತಾರೆ. ಕಾರಿನ ಚಕ್ರಗಳು ಮುಳುಗುವಷ್ಟು ಗುಂಡಿಗಳು ಆಳವಾಗಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೇ ಎಂತಹ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ವಕೀಲ ಗುಡ್ಡಪ್ಪ ಕಾತೂರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.