ADVERTISEMENT

ಸಿಎಂ ಮೌಖಿಕ ಸೂಚನೆ ಮೇರೆಗೆ ಜನಿವಾರಕ್ಕೆ ಕತ್ತರಿ: ಪ್ರಮೋದ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 12:59 IST
Last Updated 22 ಏಪ್ರಿಲ್ 2025, 12:59 IST
ಜನಿವಾರ ವಿಚಾರವಾಗಿ ಬ್ರಾಹ್ಮಣ ವಿದ್ಯಾರ್ಥಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶಿರಸಿಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಯಿತು
ಜನಿವಾರ ವಿಚಾರವಾಗಿ ಬ್ರಾಹ್ಮಣ ವಿದ್ಯಾರ್ಥಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶಿರಸಿಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಯಿತು   

ಶಿರಸಿ: ‘ಬ್ರಾಹ್ಮಣ್ಯ ಎಂಬುದು ಜಾತಿಯಲ್ಲ; ಬದಲಾಗಿ ಸಿದ್ಧಾಂತ, ಆದರ್ಶವಾಗಿದೆ. ಜನಿವಾರ ಕೂಡ ದಾರವಲ್ಲ; ಬದಲಾಗಿ ಅದು ಸಂಸ್ಕಾರವಾಗಿದೆ. ಇಂಥ ಸಿದ್ಧಾಂತ ಹಾಗೂ ಸಂಸ್ಕಾರದ ಮೇಲಿನ ದಾಳಿ ಆಕಸ್ಮಿಕವಲ್ಲ. ಕಾಂಗ್ರೆಸ್ ಸರ್ಕಾರದ ಸಿ.ಎಂ ಮೌಖಿಕ ಸೂಚನೆ ಮೇರೆಗೆ ಜನಿವಾರ ಕತ್ತರಿಸುವ ಘಟನೆಗಳು ನಡೆದಿವೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ವಾಗ್ದಾಳಿ ನಡೆಸಿದರು.

ನಗರದ ರಾಘವೇಂದ್ರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಜನಿವಾರ ವಿಚಾರವಾಗಿ ಬ್ರಾಹ್ಮಣ ವಿದ್ಯಾರ್ಥಿ ಮೇಲೆ ನಡೆದ ದೌರ್ಜನ್ಯ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ‘ಜನಿವಾರ ಕತ್ತರಿಸುವ ಜನರು ಔರಂಗಜೇಬನ ವಂಶಜರಾಗಿದ್ದಾರೆ. ಹಿಂದೂ ವಿರೋಧಿಗಳ ಮಾರ್ಗದರ್ಶನ ಪಡೆದು ಕಾಂಗ್ರೆಸ್ ಸರ್ಕಾರ ಇಂಥ ಕುಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಇಂಥ ಕಾಲಘಟ್ಟದಲ್ಲಿ ಶಾಸ್ತ್ರ ಹಾಗೂ ಶಸ್ತ್ರಗಳು ಇವೆರಡೂ ಬ್ರಾಹ್ಮಣರಿಗೆ ಬೇಕಿದೆ. ಬ್ರಾಹ್ಮಣ್ಯ ಹಾಗೂ ಜ್ಞಾನದ ಮಿನ ದಾಳಿಯನ್ನು ಶಾಸ್ತ್ರ ಹಾಗೂ ಶಸ್ತ್ರಗಳ ಮೂಲಕವೇ ಎದುರಿಸಬೇಕು’ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯ ಶ್ರೀಪಾದ ರಾಯ್ಸದ್ ಮಾತನಾಡಿ, ‘ಜನಿವಾರವು ಬ್ರಾಹ್ಮಣರ ಅಸ್ಮಿತೆಯ ಸಂಕೇತವಾಗಿದೆ. ಸ‌ನಾತನ ಹಿಂದೂ ಧರ್ಮ ನಮಗೆ ನೀಡಿದ ಮಹೋನ್ನತ ಅವಕಾಶ ಇದಾಗಿದೆ. ಅದನ್ನು ವಿರೋಧಿಸುವುದು ಹಕ್ಕಿನ ಮೇಲಿನ ದಾಳಿಯಾಗಿದೆ. ಇದನ್ನು ರಾಜ್ಯವ್ಯಾಪಿ ಹೋರಾಟ ಅಣಿಗೊಳಿಸುವ ಮೂಲಕ ಖಂಡಿಸಲಾಗುವುದು’ ಎಂದರು.

ADVERTISEMENT

ಶಿರಸಿ ಜೀವಜಲ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ‘ನಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆದಿರುವುದು ಖಂಡನಿಯ. ಬ್ರಾಹ್ಮಣರ ತಂಟೆಗೆ ಬಂದರೆ ಏನಾಗುತ್ತದೆ ಎಂಬುದನ್ನು ನಾವು ತೋರಿಸಬೇಕಿದೆ. ನಾವು ಒಟ್ಟಾದರೆ ನಮ್ಮನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂಘಟಿತರಾಗಿ ಬೆಳೆದರೆ, ನಮ್ಮನ್ನು ಎದುರಿಸುವ ತಾಕತ್ತು ಯಾರಿಗೂ ಇಲ್ಲ‌’ ಎಂದರು.

ವಿದ್ವಾಂಸ ಉಮಾಕಾಂತ ಭಟ್, ಸ್ವರ್ಣವಲ್ಲೀ ಮಠ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ, ಪ್ರಮುಖರಾದ ಎಂ.ಎಂ.ಭಟ್, ಕೆ.ವಿ.ಭಟ್, ನಿರ್ಮಲಾ ಹೆಗಡೆ ಇದ್ದರು. 

ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಭಾ ನಿರ್ಣಯಗಳು

  • ಪರೀಕ್ಷಾ ವಂಚಿತ ವಿದ್ಯಾರ್ಥಿಗೆ ಪೂರ್ಣಾಂಕ ನೀಡಬೇಕು;ಇಲ್ಲವಾದಲ್ಲಿ ಉಚಿತ ಎಂಜಿನಿಯರಿಂಗ್ ಸೀಟು ನೀಡಬೇಕು.

  • ಜನಿವಾರ ತೆಗೆಸಿದ ಮತ್ತು ತುಂಡರಿಸಿದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು

  • ಇ.ಡಬ್ಲ್ಯು.ಎಸ್ ನ್ನು ಕೂಡಲೆ ಜಾರಿ ಮಾಡಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಮತ್ತು ಅದರ ಮಾನದಂಡದಲ್ಲಿ ಬದಲಾವಣೆ ಮಾಡಬೇಕು

  • ಸಿ.ಇ.ಟಿ. ಪರೀಕ್ಷಾ ಮಂಡಳಿಯ ನಿಯಮಗಳಲ್ಲಿರುವ ಹಲವು ಅಸಂಗತಗಳನ್ನು ಕರಾರುವಾಕ್ಕಾಗಿ ಪರಿಷ್ಕರಿಸಿ ಸುಸಂಬದ್ಧಗೊಳಿಸಬೇಕು.

  • ಜಾತಿಗಣತಿಯು ಅವೈಜ್ಞಾನಿಕವಾಗಿದ್ದು ಕೂಡಲೇ ಅದನ್ನು ತಿರಸ್ಕರಿಸಿ ಹೊಸದಾಗಿ ಜಾತಿ ಗಣತಿಯನ್ನು ಮಾಡಬೇಕು.

  • ರಾಜ್ಯದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಿ ಅದರ ಕಾರ್ಯಕ್ಷಮತೆಗೆ ಬಲ ತುಂಬಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.