ADVERTISEMENT

ಶಿರೂರು ಗುಡ್ಡ ಕುಸಿತ ಪ್ರಕರಣ| ಅಧಿಕಾರಿಗಳ ವಿರುದ್ಧ ಪಾದಯಾತ್ರೆ: ಪ್ರಣವಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:35 IST
Last Updated 26 ಜುಲೈ 2025, 4:35 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಅಂಕೋಲಾ: ‘ಉತ್ತರ ಕನ್ನಡ ಜಿಲ್ಲೆಯನ್ನು ರಾಜಕಾರಣಿಗಳು ಅಭಿವೃದ್ಧಿಗೊಳಿಸದೇ ಇಲ್ಲಿಯ ಜನರನ್ನು ನಿರುದ್ಯೋಗಿಗಳನ್ನಾಗಿಸಿದ್ದಾರೆ. ಹೀಗಾಗಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿಯ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ’ ಎಂದು‌ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಶಿರೂರು ಗುಡ್ಡ ಕುಸಿತ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಇಲ್ಲಿ ಎಲ್ಲ ಪಕ್ಷಗಳು ಒಂದೇ ರೀತಿಯಾಗಿದ್ದು, ಆಮಿಷಗಳಿಗೆ ಒಳಗಾಗುತ್ತಿದ್ದಾರೆ. ಈ ಹಿಂದಿನ ಎಸ್‌ಪಿ ಹಾಗೂ ಜಿಲ್ಲಾಧಿಕಾರಿ ಅವರ ವಿರುದ್ಧ ಈ.ಡಿ ಕೇಸ್ ಆಗಿದೆ. ಇವರ ಮುಖವಾಡವು ಮುಂದಿನ ದಿನಗಳಲ್ಲಿ ಬಯಲಾಗಲಿದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಮೃತಪಟ್ಟವರಿಗೆ ₹25 ಲಕ್ಷ ಪರಿಹಾರವನ್ನು ಸರ್ಕಾರ ನೀಡಿದೆ. ತಲಾ ₹5 ಲಕ್ಷದಂತೆ ಐಆರ್‌ಬಿಯಿಂದ ಹಣ ಪಡೆದು ಸರ್ಕಾರವೇ ಪರಿಹಾರ ನೀಡಿದೆ ಎಂಬಂತೆ ಬಿಂಬಿಸಿರುವುದು ನಾಚಿಕೆಗೇಡು. ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟವರಿಗೆ ಸರ್ಕಾರ ಒಂದು ರೂಪಾಯಿ ಕೂಡ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಕೇರಳದ ವಯನಾಡಿನಲ್ಲಿ ನಡೆದ ಗುಡ್ಡ ದುರಂತದಲ್ಲಿ 100 ಮನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಮಿಸಿಕೊಟ್ಟಿದ್ದಾರೆ. ಏಕೆಂದರೆ ಅದು ರಾಹುಲ್ ಗಾಂಧಿ ಕ್ಷೇತ್ರವಾಗಿತ್ತು. ಆದರೆ ಶಿರೂರಿನಲ್ಲಿ ಯಾವುದೇ ಮನೆ ಕಟ್ಟಿಸಿಕೊಡದೇ ಕೇವಲ 6 ಮನೆಗೆ ₹1.20 ಲಕ್ಷ  ನೀಡಿ ಕೈ ತೊಳೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯ ನಾಮಧಾರಿ, ಮರಾಠಿ, ಹಾಲಕ್ಕಿ ಒಕ್ಕಲಿಗರು, ಬ್ರಾಹ್ಮಣರನ್ನು ಕೂಡ ತಮ್ಮ ಕೈಮುಷ್ಠಿಯಲ್ಲಿ ಹಿಡಿದುಕೊಳ್ಳುವಂತೆ ಇಲ್ಲಿ ರಾಜಕೀಯ ನಡೆಯುತ್ತಿದೆ. ಇವರ ಗತಿಯೇ ಹೀಗಾದರೆ ಇನ್ನು ಸಣ್ಣಪುಟ್ಟ ಸಮುದಾಯದ, ನೊಂದವರ ಗತಿಯೇನು? ಹೀಗಾಗಿ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಆರೋಪಿಗಳಿಗೆ ಶರಣಾದ ತನಿಖಾಧಿಕಾರಿ ಚಂದ್ರಶೇಖರ ಮಠಪತಿ ಅವರನ್ನು ಅಮಾನತು ಮಾಡಿ ತನಿಖೆ ನಡೆಸುವಂತೆ ಎಸ್‌ಪಿ ಅವರಿಗೂ ಮನವಿ ಸಲ್ಲಿಸಿದ್ದು. ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಭೇಟಿಯಾಗುತ್ತೇನೆ’ ಎಂದರು.

‘ಜನರಲ್ಲಿ ಜಾಗೃತಿ ಉಂಟುಮಾಡಲು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಭೆ ನಡೆಸಿ, ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ವಿವರಿಸಿದರು.

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲ್ಲೂಕು ಘಟಕದ ಅಧ್ಯಕ್ಷ ದಾಮೋದರ ಜಿ. ನಾಯ್ಕ, ಪ್ರಮುಖರಾದ ವಿನೋದ ನಾಯ್ಕ, ಮಂಜುನಾಥ, ಯಲ್ಲಪ್ಪ,ವೆಂಕಟೇಶ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.