ADVERTISEMENT

ಜಿಲ್ಲೆಯ ಜನರ ನಿರೀಕ್ಷೆ ಹುಸಿ

ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆ ನಿರ್ಲಕ್ಷ್ಯ; ಬಾಕಿ ಉಳಿದ ಖಾತೆ ಸಾಲ ಮನ್ನಾ, ಲಾಭವಿಲ್ಲದ ಬೆಳೆ ಸಾಲ ಮನ್ನಾ

ಸಂಧ್ಯಾ ಹೆಗಡೆ
Published 5 ಜುಲೈ 2018, 13:54 IST
Last Updated 5 ಜುಲೈ 2018, 13:54 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಶಿರಸಿ: ವಿಧಾನಸಭೆ ಚುನಾವಣೆ ಪೂರ್ವ ಸಂಚಾರದಲ್ಲಿ ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಇದೇ ಗುಂಗಿನಲ್ಲಿದ್ದ ಜಿಲ್ಲೆಯ ಜನರಿಗೆ, ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಅವರು ಮಂಡಿಸಿದ ಬಜೆಟ್ ತೀವ್ರ ನಿರಾಸೆ ತಂದಿದೆ.

ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ನೀರಾವರಿ ವ್ಯವಸ್ಥೆ ಕಲ್ಪಿಸಲು ಆಯ್ಕೆ ಮಾಡಿಕೊಂಡಿರುವ ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದಾಗಿದೆ. ಇದೊಂದು ಯೋಜನೆಯನ್ನು ಹೊರತುಪಡಿಸಿದರೆ, ಜಿಲ್ಲೆಗೆ ಇನ್ನಾವ ಹೊಸ ಕಾರ್ಯಕ್ರಮಗಳು ಇಲ್ಲ. ಸಾಲ ಮನ್ನಾ ಯೋಜನೆಯಲ್ಲಿ ಖಾತೆ ಸಾಲ ಮನ್ನಾ ಆಗಬಹುದೆಂಬ ಘಟ್ಟದ ಮೇಲಿನ ತಾಲ್ಲೂಕುಗಳ ರೈತರನಿರೀಕ್ಷೆ ಹುಸಿಯಾಗಿದೆ.

ಮೀನುಗಾರಿಕೆ ವೃತ್ತಿ ಸಂಬಂಧ ವಿಶೇಷ ಪ್ಯಾಕೇಜ್, ಡೀಸೆಲ್ ಸಬ್ಸಿಡಿ ಹೆಚ್ಚಳ, ದೋಣಿ ಖರೀದಿಗೆ ವಿಶೇಷ ಸಾಲ ಸೌಲಭ್ಯ ನೀಡುವಂತೆ ವಿನಂತಿಸಿದ್ದ ಮೀನುಗಾರರ ಬೇಡಿಕೆಯೂ ಬದಿಗೆ ಸರಿದಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯುವ ನಿಯಮ ಸಡಿಲಿಕೆ, ಸರ್ಕಾರ–ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತುವ, ಅರಣ್ಯ ವಿಸ್ತರಣೆಗೆ ಆದ್ಯತೆ ನೀಡುವ ಜಿಲ್ಲೆಯ ಪರಿಸರ ಪೂರಕ ಯೋಜನೆಗಳು ಬಜೆಟ್‌ನಲ್ಲಿ ನಗಣ್ಯವಾಗಿವೆ. ಶಿರಸಿಗೆ ವೈದ್ಯಕೀಯ ಕಾಲೇಜು ಮಂಜೂರುಗೊಳಿಸಬೇಕೆಂಬ ದಶಕದ ಹಿಂದಿನ ಬೇಡಿಕೆ ಈ ಬಾರಿಯ ಬಜೆಟ್‌ನಲ್ಲೂ ಈಡೇರಿಲ್ಲ.

ADVERTISEMENT

ಜಿಲ್ಲೆಯಲ್ಲಿ ಕೇವಲ 549 ಕಟ್‌ಬಾಕಿದಾರರು:

ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸುಮಾರು 80ಸಾವಿರ ರೈತರು ಒಟ್ಟು ₹ 620.31 ಕೋಟಿ ಮೊತ್ತದ ಬೆಳೆ ಸಾಲ ಪಡೆದಿದ್ದರು. 549 ರೈತರ ಒಟ್ಟು ₹ 6.13 ಕೋಟಿ ಕಟ್‌ಬಾಕಿ ಉಳಿದಿತ್ತು. ಭತ್ತ ಹಾಗೂ ಉಳಿದ ಬೆಳೆಗಳಿಗೆ ಎರಡು ಅವಧಿಯಲ್ಲಿ ಸಾಲಮರುಪಾವತಿಸುವ ಕೊನೆಯ ದಿನಾಂಕ ನಿಗದಿ ಇರುವುದರಿಂದ, ಬೆಳೆಸಾಲ ತುಂಬಿದವರ ನಿಖರ ಮಾಹಿತಿ ಇನ್ನಷ್ಟೇ ಪ್ರಾಥಮಿಕ ಸಹಕಾರಿ ಸಂಘಗಳಿಂದ ಬರಬೇಕಾಗಿದೆ. ಕಳೆದ ಸಾಲಿನಲ್ಲಿ ಶೇ 98ರಷ್ಟು ಬೆಳೆಸಾಲ ಮರುಪಾವತಿಯಾಗಿತ್ತು ಎನ್ನುತ್ತಾರೆ ಕೆಡಿಸಿಸಿ ಬ್ಯಾಂಕ್ ಅಧಿಕಾರಿಗಳು.

‘ಸರ್ಕಾರ ಕಟ್‌ಬಾಕಿ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ನಮ್ಮ ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದ ಶೇ 99ರಷ್ಟು ರೈತರು ನಿಗದಿತ ಅವಧಿಯ ಪೂರ್ವದಲ್ಲೇ ತುಂಬುತ್ತಾರೆ. ಕೈಯಲ್ಲಿ ಹಣವಿಲ್ಲದಿದ್ದರೂ, ಕೈಗಡ ಪಡೆದು ಸಾಲದಿಂದ ಮುಕ್ತರಾಗಲು ಪ್ರಯತ್ನಿಸುತ್ತಾರೆ. ಇದರಿಂದಾಗಿ, ಸರ್ಕಾರದ ಸಾಲ ಮನ್ನಾ ಘೋಷಣೆ ಜಿಲ್ಲೆಯ ರೈತರಿಗೆ ಕಿಂಚಿತ್ ಪ್ರಯೋಜನವಾಗಿಲ್ಲ. ನ್ಯಾಯಯುತವಾಗಿ ಸಾಲ ತುಂಬುವವರಿಗೆ ಅನ್ಯಾಯವಾಗಿದೆ. ಪ್ರತಿ ಸೊಸೈಟಿಯ ಬಹುತೇಕ ರೈತ ಸದಸ್ಯರು ಬೆಳೆಸಾಲ ಪಡೆಯುತ್ತಾರೆ. ಅವರಲ್ಲಿ ಕಟ್‌ಬಾಕಿ ಉಳಿಸಿಕೊಳ್ಳುವವರು 6–8 ಮಂದಿ ಮಾತ್ರ’ ಎನ್ನುತ್ತಾರೆ ರೈತ ಬಿಸಲಕೊಪ್ಪದ ಜಿ.ಕೆ. ಹೆಗಡೆ.

‘ಪ್ರಾಥಮಿಕ ಸಹಕಾರಿ ಸಂಘಗಳ ಪ್ರಮುಖರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳ ರೈತರು ಕೃಷಿ ಉದ್ದೇಶಕ್ಕಾಗಿ ಮಾಡಿರುವ ₹ 450 ಕೋಟಿ ಖಾತೆ ಸಾಲ ಮನ್ನಾ ಮಾಡುವಂತೆ ವಿನಂತಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಟಿಎಸ್‌ಎಸ್‌ ವ್ಯವಸ್ಥಾಪಕ ರವೀಶ ಹೆಗಡೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಘೋಷಿಸಿದ್ದ ಸಾಲ ಮನ್ನಾದ ಪ್ರಕಾರ ₹ 300 ಕೋಟಿ ಮೊತ್ತ ಸಹಕಾರಿ ಸಂಘಗಳಿಗೆ ಬರಬೇಕಾಗಿದೆ. ಈ ಕುರಿತ ಪ್ರಸ್ತಾವವನ್ನು ಕೆಡಿಸಿಸಿ ಬ್ಯಾಂಕ್ ಸರ್ಕಾರಕ್ಕೆ ಸಲ್ಲಿಸಿದೆ. ಪ್ರಸ್ತುತ ಘೋಷಿಸಿರುವ ಬೆಳೆಸಾಲ ಕಟ್ ಬಾಕಿ ಮನ್ನಾ ಸಂಬಂಧ ಮತ್ತೆ ಹೊಸ ಪ್ರಸ್ತಾವ ಸಲ್ಲಿಸಬೇಕೇ ಎಂಬ ಕುರಿತು ಗೊಂದಲ ಸೃಷ್ಟಿಯಾಗಿದೆ.

ಖಾತೆ ಸಾಲ ಮನ್ನಾ ಮಾಡಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿತ್ತು. ಇದು ಸಾಧ್ಯವಾಗುವುದಿಲ್ಲವೆಂದಾದಲ್ಲಿ ಇದನ್ನು ಕೃಷಿಸಾಲವೆಂದು ಪರಿವರ್ತಿಸುವಂತೆ ಬೇಡಿಕೆ ಇಡಲಾಗಿತ್ತು. ರೈತರ ಪರ ನಿಲುವು ನಿರೀಕ್ಷಿಸಿದ್ದ ನಮಗೆ ತೀವ್ರ ನೋವಾಗಿದೆ - ಜಿ.ಎನ್.ಹೆಗಡೆ ಮುರೇಗಾರಜಿಲ್ಲಾ ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.