ADVERTISEMENT

ಶಿರಸಿ ಮಾರಿಕಾಂಬಾ ಜಾತ್ರೆಗೆ ಸಿದ್ಧತೆ

ಶೃಂಗಾರಗೊಳ್ಳುತ್ತಿರುವ ಮಾರಿಕಾಂಬಾ ದೇವಾಲಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 12:55 IST
Last Updated 5 ಫೆಬ್ರುವರಿ 2020, 12:55 IST
ಶಿರಸಿ ಮಾರಿಕಾಂಬಾ ಜಾತ್ರೆಯ ಪೋಸ್ಟರ್‌ಗಳನ್ನು ಧರ್ಮದರ್ಶಿ ಮಂಡಳಿ ಸದಸ್ಯರು ಬಿಡುಗಡೆಗೊಳಿಸಿದರು
ಶಿರಸಿ ಮಾರಿಕಾಂಬಾ ಜಾತ್ರೆಯ ಪೋಸ್ಟರ್‌ಗಳನ್ನು ಧರ್ಮದರ್ಶಿ ಮಂಡಳಿ ಸದಸ್ಯರು ಬಿಡುಗಡೆಗೊಳಿಸಿದರು   

ಶಿರಸಿ: ಮಾ.3ರಿಂದ 11ರವರೆಗೆ ನಡೆಯಲಿರುವ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಉತ್ಸವದ ಆಹ್ವಾನ ಪತ್ರಿಕೆ, ಪೋಸ್ಟರ್, ಪ್ರಚಾರ ಸಾಮಗ್ರಿಗಳನ್ನು ಬುಧವಾರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಸದಸ್ಯರಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಶಶಿಕಲಾ ಚಂದ್ರಾಪಟ್ಟಣ ಬಿಡುಗಡೆಗೊಳಿಸಿದರು.

ಮಾರಿಕಾಂಬಾ ಜಾತ್ರೆಯ ಸಿದ್ಧತೆಗಳು ನಡೆಯುತ್ತಿವೆ. ಮಾ.3ರಂದು ಸರ್ವಾಲಂಕಾರಭೂಷಿತೆ ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ರಾತ್ರಿ 11.11ರಿಂದ 11.18ರ ನಡುವಿನ ಅವಧಿಯಲ್ಲಿ, ಮಾ.4ರ ಬೆಳಿಗ್ಗೆ 7.05ರಿಂದ ರಥಾರೋಹಣ ಮೆರವಣಿಗೆ ಆರಂಭವಾಗಿ ಮಧ್ಯಾಹ್ನ 12.43ರ ಒಳಗಾಗಿ ಬಿಡಕಿಬೈಲಿನಲ್ಲಿ ಸ್ಥಾಪನೆ, ಮಾ.5ರ ಬೆಳಿಗ್ಗೆ 5ರಿಂದ ಸೇವೆಗಳು ಪ್ರಾರಂಭವಾಗಲಿವೆ. ಮಾ.11ರ 10.18 ಗಂಟೆಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ವೆಂಕಟೇಶ ನಾಯ್ಕ ಹೇಳಿದರು.

ADVERTISEMENT

ಜಾತ್ರೆಯಿಂದ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಾರಿ 20 ಲಕ್ಷಕ್ಕೂ ಅಧಿಕ ಭಕ್ತರು ಬರಬಹುದೆಂದು ನಿರೀಕ್ಷಿಸಲಾಗಿದೆ. ಜಾತ್ರೆಯ ಕುರಿತು ಹೆಚ್ಚು ಪ್ರಚಾರ ನಡೆಸುವ ಉದ್ದೇಶದಿಂದ ನೆರೆಯ ಜಿಲ್ಲೆಗಳಲ್ಲಿ ಜಾಹೀರಾತು ಫಲಕ ಅಳವಡಿಸುವ ಜತೆಗೆ, ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪ್ರಚಾರ ಆರಂಭಿಸಲಾಗಿದೆ. ಅಂಗವಿಕಲರು, ವೃದ್ಧರಿಗೆ ವಿಶೇಷ ದರ್ಶನ ವ್ಯವಸ್ಥೆ, ಅಂಗವಿಕಲರಿಗೆ ಗಾಲಿಕುರ್ಚಿ ವ್ಯವಸ್ಥೆಗೊಳಿಸಲಾಗಿದೆ. ಪಾಲಕರಿಂದ ಕೈತಪ್ಪಿಸಿಕೊಂಡ ಮಕ್ಕಳ ಪತ್ತೆಗೆ ಅನುಕೂಲವಾಗುವಂತೆ ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ದೇವಾಲಯದ ವ್ಯವಸ್ಥಾಪಕ ನರೇಂದ್ರ ಜಾಧವ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.