ADVERTISEMENT

ಬೆಲೆಯೇರಿ ಬಂದ ಗಣಪ

ಮಾರುಕಟ್ಟೆಯಲ್ಲಿ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:16 IST
Last Updated 1 ಸೆಪ್ಟೆಂಬರ್ 2019, 16:16 IST
ಹೂ ಖರೀದಿಯಲ್ಲಿ ನಿರತರಾಗಿದ್ದ ಗ್ರಾಹಕರು
ಹೂ ಖರೀದಿಯಲ್ಲಿ ನಿರತರಾಗಿದ್ದ ಗ್ರಾಹಕರು   

ಶಿರಸಿ: ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆಯೂ ಗೌರಿ–ಗಣೇಶ ಹಬ್ಬದ ಸಂಭ್ರಮ ಗರಿಗೆದರಿದೆ. ಮಾರುಕಟ್ಟೆಯಲ್ಲಿ ಆಲಂಕಾರಿಕ ವಸ್ತುಗಳು, ಹೂವು, ಹಣ್ಣು ಖರೀದಿ ಭರಾಟೆ ಜೋರಾಗಿದೆ. ಇಡೀ ಮಾರುಕಟ್ಟೆಯಲ್ಲಿ ಸಂಭ್ರಮದ ಅಲೆ ಹರಡಿದೆ. ಆದರೆ, ಹೂ, ಹಣ್ಣು, ತರಕಾರಿ ಬೆಲೆ ದಿಢೀರ್ ಏರಿಕೆಯಾಗಿರುವುದು ಗ್ರಾಹಕರಿಗೆ ಬೇಸರ ಮೂಡಿಸಿದೆ.

ಬಿಡಿ ಹೂವು ಕೆ.ಜಿ.ಯೊಂದಕ್ಕೆ ₹ 300ರಿಂದ 400ರವರೆಗೆ ಮಾರಾಟವಾಗುತ್ತಿದೆ. ಮಲ್ಲಿಗೆ ಮೊಗ್ಗಿನ ದರ ಕೆ.ಜಿ.ಗೆ ₹ 600, ಸುಗಂಧರಾಜ ₹ 150-200ಕ್ಕೆ ತಲುಪಿದೆ. ಸೇಬುಹಣ್ಣು ಕೆ.ಜಿ.ಗೆ ₹ 120ರಿಂದ 140, ಬಾಳೆ ಹಣ್ಣು ₹ 50–60, ದಾಳಿಂಬೆ ₹ 150–200, ದ್ರಾಕ್ಷಿ ₹ 200–220 ಬೆಲೆ ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.

ಸೋಮವಾರ (ಸೆ.01) ಗಣೇಶ ಪ್ರತಿಷ್ಠಾಪನೆ ನಡೆಯಲಿದೆ. ಮಳೆಯಿರುವ ಕಾರಣ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ವ್ಯವಸ್ಥಿತವಾದ ಮಂಟಪ ರಚಿಸಿವೆ. ಗುಡಿಗಾರರ ಮನೆಯಲ್ಲಿ ಮೂಡಿದ ಗಣಪ ವಾಹನವೇರಿ ಹೊರಟಿದ್ದಾನೆ. ಹಳ್ಳಿಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರು ಭಾನುವಾರ ಸಂಜೆ ಮೆರವಣಿಗೆಯಲ್ಲಿ ಗಣಪತಿ ಮೂರ್ತಿ ಕೊಂಡೊಯ್ದರು.

ADVERTISEMENT

194 ಸಾರ್ವಜನಿಕ ಗಣೇಶ

ಶಿರಸಿ ಪೊಲೀಸ್ ವೃತ್ತದಲ್ಲಿ ಒಟ್ಟು 194 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಹಬ್ಬದ ಆಚರಣೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ, ಪೊಲೀಸ್ ಇಲಾಖೆ 350ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಿದೆ. ಬನವಾಸಿ ಠಾಣೆ ವ್ಯಾಪ್ತಿಯಲ್ಲಿ 94, ಶಿರಸಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 66, ನಗರ ಠಾಣೆ ವ್ಯಾಪ್ತಿಯಲ್ಲಿ 16 ಹಾಗೂ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ 19 ಕಡೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ನಡೆಯುತ್ತದೆ.

ಪ್ರತಿದಿನ ರಾತ್ರಿ ಸಮಿತಿಯ ಸದಸ್ಯರು ಅಥವಾ ಸ್ವಯಂಸೇವಕರು ಗಣೇಶ ಮೂರ್ತಿ ಇರುವ ಸ್ಥಳದಲ್ಲಿ ಇದ್ದು ಭದ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಎಲ್ಲ ಸಮಿತಿಯವರಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಗಣೇಶ ವಿಸರ್ಜನೆ ವೇಳೆ ಕನಿಷ್ಠ 25 ಸ್ವಯಂ ಸೇವಕರು ಪೊಲೀಸರ ಜೊತೆ ಭದ್ರತೆಗೆ ಸಹಕರಿಸಬೇಕು. ಈ ಕುರಿತು ನಿರ್ಲಕ್ಷ್ಯ ತೋರಿದರೆ ಅಥವಾ ಏನಾದರೂ ಅವಘಡ ಸಂಭವಿಸಿದರೆ ಸಮಿತಿಯವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಪಟಾಕಿ ಹೊಡೆಯುವ ಹಣವನ್ನು ನೆರೆಪೀಡಿತ ಜನರಿಗೆ ನೀಡಿ ಮಾನವೀಯತೆ ತೋರಬಹುದು ಎಂದು ಸಲಹೆ ಮಾಡಿದೆ. ಪ್ರತಿ ಸಮಿತಿ ಕಡ್ಡಾಯವಾಗಿ ಪರವಾನಗಿ ಪಡೆದು ಸಾರ್ವಜನಿಕ ಗಣೇಶ ಉತ್ಸವವನ್ನು ಆಚರಿಸಬೇಕು. ನಗರ ಹಾಗೂ ಗ್ರಾಮೀಣ ಠಾಣೆಯಲ್ಲಿ ಮಾತ್ರ ಪ್ರತಿಷ್ಠಾಪಿತನಾಗುತ್ತಿದ್ದ ಗಣೇಶ ಈ ಬಾರಿ ಮಾರುಕಟ್ಟೆ ಠಾಣೆಯನ್ನು ಪ್ರವೇಶಿಸಲಿದ್ದಾನೆ. ಪಿ.ಎಸ್.ಐ ಶಶಿಕುಮಾರ ಅವರ ಮುಂದಾಳತ್ವದಲ್ಲಿ ಈ ವರ್ಷದಿಂದ ಮಾರುಕಟ್ಟೆ ಪೊಲೀಸರು ವಿಘ್ನವಿನಾಯಕನ ಪೂಜೆಗೆ ಸಿದ್ಧತೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.