ADVERTISEMENT

ಮೀನುಗಾರರ ಮೇಲಿನ ಸುಳ್ಳು ಪ್ರಕರಣ ಹಿಂಪಡೆಯಲಿ: ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 14:40 IST
Last Updated 8 ಮಾರ್ಚ್ 2025, 14:40 IST

ಕಾರವಾರ: ‘ಹೊನ್ನಾವರದ ಟೊಂಕದಲ್ಲಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಹೋರಾಟ ನಡೆಸಿದ ಮೀನುಗಾರರ ಮೇಲೆ ಪೊಲೀಸರು ದಾಖಲಿಸಿದ ಸುಳ್ಳು ಪ್ರಕರಣವನ್ನು ಸರ್ಕಾರ ಹಿಂಪಡೆಯಬೇಕು’ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘದ (ಎಪಿಸಿಆರ್) ಕಾನೂನು ಸಲಹೆಗಾರ ಬಿ.ಟಿ.ವೆಂಕಟೇಶ್ ಆಗ್ರಹಿಸಿದರು.

‘ಮೀನುಗಾರಿಕೆ ನಂಬಿ ಜೀವನ ಸಾಗಿಸುತ್ತಿರುವ ಮೀನುಗಾರರನ್ನು ಒಕ್ಕಲೆಬ್ಬಿಸಿ ಯೋಜನೆ ಜಾರಿಗೊಳಿಸಿದರೆ ಅವರ ಜೀವನದ ಕಥೆ ಏನು ಎಂಬುದನ್ನು ಸರ್ಕಾರ ಯೋಚಿಸಿಲ್ಲ. ತಮ್ಮ ಜೀವನಭದ್ರತೆ ಪ್ರಶ್ನಿಸಿದ ಮೀನುಗಾರರ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಕಾರಣರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜನರು ವಾಣಿಜ್ಯ ಬಂದರು ಬೇಡ ಎನ್ನುತ್ತಿದ್ದರೂ ಆಡಳಿತ ವ್ಯವಸ್ಥೆ ಖಾಸಗಿ ಕಂಪನಿ ಪರ ನಿಂತಿರುವ ಶಂಕೆ ಇದೆ. ಕೂಡಲೇ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಸಮರ್ಥ ಜಿಲ್ಲಾಧಿಕಾರಿ ನೇಮಿಸಬೇಕು’ ಎಂದರು.

ADVERTISEMENT

‘ಮಲ್ಲುಕುರ್ವ ಗ್ರಾಮ ಸಮುದ್ರದಲ್ಲಿ ಕೊಚ್ಚಿ ಹೋದಾಗ, ಅವರ ಹೋರಾಟ ಫಲವಾಗಿ ಸರ್ವೆ ನಂಬರ್ 303 ರಲ್ಲಿ ನಿವೇಶನ ಹಂಚಿತ್ತು. ಮೀನುಗಾರರಿಗೆ ಸೈಟ್‌ಗಳನ್ನು, ಪಟ್ಟಾಗಳನ್ನು ದಶಕದ ಹಿಂದೆಯೇ ನೀಡಲಾಗಿದೆ. ಅವರ ನೆಲೆ ಕಸಿದುಕೊಂಡರೆ ಅದಕ್ಕೆ ಪರಿಹಾರ ಒದಗಿಸಬೇಕು. ವಾಣಿಜ್ಯ ಬಂದರಿನಲ್ಲಿ ಯಾವೆಲ್ಲ ರಫ್ತು ಚಟುವಟಿಕೆ ನಡೆಯುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಹುಸೇನ್, ವಕೀಲ ಶಂಕರ್, ಅನ್ಸರ್, ಅಫ್ವಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.