ADVERTISEMENT

ಖಾಸಗಿ ಆಂಬುಲೆನ್ಸ್ ಚಾಲಕರ ಪ್ರತಿಭಟನೆ

ಭಟ್ಕಳ: ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ, ಇತರ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 12:05 IST
Last Updated 16 ಏಪ್ರಿಲ್ 2020, 12:05 IST
ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಭಟ್ಕಳದಲ್ಲಿ ಖಾಸಗಿ ಆಂಬುಲೆನ್ಸ್ ಚಾಲಕರ, ಮಾಲೀಕರು ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು
ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಭಟ್ಕಳದಲ್ಲಿ ಖಾಸಗಿ ಆಂಬುಲೆನ್ಸ್ ಚಾಲಕರ, ಮಾಲೀಕರು ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು   

ಭಟ್ಕಳ: ಚಿಕಿತ್ಸೆಗಾಗಿ ರೋಗಿಗಳನ್ನು ಕರೆದುಕೊಂಡು ಹೋಗಲು ಖಾಸಗಿಆಂಬುಲೆನ್ಸ್‌ಗಳಿಗೆ ಉಡುಪಿ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದೆ. ಇದನ್ನು ವಿರೋಧಿಸಿ ಅವುಗಳ ಚಾಲಕರು ಗುರುವಾರ ಪಟ್ಟಣದ ಆನಂದಾಶ್ರಮ ಕಾನ್ವೆಂಟ್ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯ ಹಿನ್ನೆಲೆಯಲ್ಲಿ ಹಿಂದಿನಿಂದಲೂ ವಿವಿಧ ತೆರನಾದ ಚಿಕಿತ್ಸೆಗಳಿಗೆ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಜನರು ಉಡುಪಿ, ಮಣಿಪಾಲ, ಮಂಗಳೂರಿಗೆ ತೆರಳುವುದು ಸಾಮಾನ್ಯವಾಗಿದೆ. ತುರ್ತು ಚಿಕಿತ್ಸೆಗಾಗಿ ಖಾಸಗಿಆಂಬುಲೆನ್ಸ್ ಬಳಕೆ ಮಾಡಲಾಗುತ್ತಿದೆ. ಭಟ್ಕಳ ಕೊರೊನಾ ಹಾಟ್‌ಸ್ಪಾಟ್ ಎಂದು ಗುರುತಿಸಿಕೊಂಡ ಬಳಿಕ ಉಡುಪಿಗೆ ತೆರಳುವ ಆಂಬುಲೆನ್ಸ್ ಸೇರಿದಂತೆ ಎಲ್ಲ ವಾಹನಗಳನ್ನು ಶಿರೂರು ಚೆಕ್‌ಪೋಸ್ಟ್‌ನಲ್ಲಿ ತಡೆ ಹಿಡಿಯಲಾಗುತ್ತಿದೆ ಎಂದು ಚಾಲಕ ಅಬ್ದುಲ್ ಖಾಲಿಕ್ ದೂರಿದರು.

ಉತ್ತರಕನ್ನಡ ಜಿಲ್ಲಾಧಿಕಾರಿಗಳು ವೈದ್ಯಕೀಯ ತುರ್ತು ಸನ್ನಿವೇಶಕ್ಕಾಗಿ ತೆರಳಲು ಪಾಸ್ ನೀಡುತ್ತಿದ್ದಾರೆ.ಆದರೆ, ಉಡುಪಿ ಜಿಲ್ಲೆಯ ಪೊಲೀಸರು ಯಾವುದೇ ಆಂಬುಲೆನ್ಸ್ ಬಿಡಬಾರದು ಎಂದು ತಮ್ಮ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹಾಗಾಗಿಯಾವ ವಾಹನವನ್ನೂಬಿಡುವುದಿಲ್ಲ ಎಂದು ಉತ್ತರಿಸುತ್ತಿದ್ದಾರೆ ಎಂದು ರಬಿತಾ ಸೊಸೈಟಿಯ ಖಾಸಗಿಆಂಬುಲೆನ್ಸ್ ಚಾಲಕ ಅಮಾನ್ ಶಬೀರ್ ಹೇಳಿದರು.

ADVERTISEMENT

‘ಅತ್ಯಂತ ತುರ್ತು ಎಂದು ಒಂದು ವೇಳೆ ಉಡುಪಿ ಜಿಲ್ಲೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಿಂತಿರುಗಿ ಬಂದರೆ, ಆಂಬುಲೆನ್ಸ್ ಚಾಲಕ ಸೇರಿದಂತೆ ರೋಗಿಗಳ ಜತೆಗೆ ಬಂದವರಿಗೂ ಕ್ವಾರಂಟೈನ್ ಮುದ್ರೆ ಹಾಕಲಾಗುತ್ತಿದೆ. ಆಗ ನಮ್ಮ ಬಳಿ ಯಾರೂ
ಬರುವುದಿಲ್ಲ.ಈ ವ್ಯವಸ್ಥೆಯಿಂದ ಇತರ ರೋಗಿಗಳಿಗೂ ತೊಂದರೆಯಾಗಿದ್ದು,ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮತ್ತೊಬ್ಬಆಂಬುಲೆನ್ಸ್ ಚಾಲಕ ವಿನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಕೋರ್ಟ್‌ ಮೊರೆಗೆ ಚಿಂತನೆ: ಉತ್ತರಕನ್ನಡ ಜಿಲ್ಲೆಯಿಂದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಆರೋಗ್ಯ ತುರ್ತು ಹಾಗೂ ಪುನರ್ ಚಿಕಿತ್ಸೆಗೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಮಾಡಿರುವ ನಿರ್ಬಂಧವನ್ನು ಮೂರು ದಿನಗಳಲ್ಲಿ ಸಡಿಲಗೊಳಿಸಬೇಕು. ಇಲ್ಲದಿದ್ದರೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗುವುದು ಎಂದು ವಕೀಲರೂ ಆಗರುವಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದ್ದಾರೆ.

------

* ಉಡುಪಿಯತ್ತ ಸಾಗುವ ಆಂಬುಲೆನ್ಸ್‌ಗಳ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ತೆರವಿಗೆ ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

- ಸುನೀಲ್ ನಾಯ್ಕ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.