ಜೊಯಿಡಾ: ‘ಅರಣ್ಯ ಅಧಿಕಾರಿಗಳಿಂದ ಜನರ ಮೇಲೆ ಉಂಟಾಗುತ್ತಿರುವ ದೌರ್ಜನ್ಯ ನಿಯಂತ್ರಿಸಬೇಕು ಹಾಗೂ ಕಾಳಿ ಹುಲಿ ಸಂರಕ್ಷಿತಾರಣ್ಯದ ಪುನರ್ವಸತಿ ಯೋಜನೆಯಡಿ ನಡೆದ ಕೋಟ್ಯಂತರ ಮೊತ್ತದ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ಕುಂಬಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಬುಧವಾರ ವಿವಿಧ ಸಮಾಜ, ಸಂಘಟನೆಗಳ ಜನರು ಪ್ರತಿಭಟನೆ ನಡೆಸಿದರು.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಮೂಲನಿವಾಸಿಗಳಿಗೆ ಅಧಿಕಾರಿಗಳು, ಸಿಬ್ಬಂದಿ ಒಂದಿಲ್ಲೊಂದು ನೆಪದಲ್ಲಿ ತೊಂದರೆ ನೀಡಿ ಜನರನ್ನು ಕಾಡಿನಿಂದ ಹೊರಗೆ ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಕರಡಿ, ಹುಲಿ ತಂದು ಬಿಟ್ಟು ಜನರಲ್ಲಿ ಭಯ ಹುಟ್ಟಿಸಿ ಕಾಡಿನಿಂದ ಹೊರಗೆ ಹಾಕುವ ಹುನ್ನಾರ ಎಂದು ದೂರಿದರು.
‘ಸಂರಕ್ಷಿತಾರಣ್ಯ ವ್ಯಾಪ್ತಿಯಿಂದ ಜನರನ್ನು ಸ್ಥಳಾಂತರಿಸಿ, ಪರಿಹಾರ ನೀಡುವ ವಿಚಾರದಲ್ಲಿ ₹152 ಕೋಟಿ ಮೊತ್ತ ದುರುಪಯೋಗ ಆದ ಬಗ್ಗೆ ಶಂಕೆ ಇದೆ. 2003 ಕಾಯಿದೆ ಅಡಿಯಲ್ಲಿ ಕುಮರಿ, ಹಕ್ಕಲ, ಪಟ್ಟಾ, ಗೋಮಾಳ, ಆತೊ, ಜಮೀನು ಅರಣ್ಯ ಇಲಾಖೆ ಸಂಬಂಧಿಸಿಲ್ಲ ಎಂದು ಹೇಳಿದೆ. ನಮ್ಮ ಹಕ್ಕು , ಕರ್ತವ್ಯಗಳು ನಾವು ತಿಳಿದು ಸಾಂಘಿಕ ಹೋರಾಟ ರೂಪಿಸಬೇಕು’ ಎಂದು ಕುಣಬಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಗಾವಡಾ ಆರೋಪಿಸಿದರು.
ಹೋರಾಟಗಾರ ದತ್ತಾರಾಮ ದೇಸಾಯಿ ಮಾತನಾಡಿ, ‘ಅರಣ್ಯ ಇಲಾಖೆ ಬಿಎಸ್‍ಎನ್‍ಎಲ್ ಟವರ್‌ಗೆ ಸಂಪರ್ಕ ನೀಡಲು ತೊಂದರೆ ನೀಡುವುದು ಸರಿಯಲ್ಲ’ ಎಂದರು.
ಕೃಷಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಭಟ್ಟ, ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ರವಿ ರೇಡಕರ, ಗ್ರಾಮ ಪಂಚಾಯಿತಿ ಸದಸ್ಯ ಸುಬ್ರಾಯ ಭಟ್, ಮಾಬಳು ಕುಂಡಲಕರ, ರಪಿಕ್ ಖಾಜಿ ಪಾಲ್ಗೊಂಡಿದ್ದರು.
ತಹಶೀಲ್ದಾರ್ ಮಂಜುನಾಥ ಮಧ್ಯಸ್ಥಿಕೆ ವಹಿಸಿ ಅ.3ರ0 ಒಳಗೆ ಜನಪ್ರತಿನಿಧಿಗಳು, ಅರಣ್ಯ ಅಧಿಕಾರಿಗಳು ಹಾಗೂ ಹೋರಾಟಗಾರರ ಸಭೆ ಕರೆಯುವ ಭರವಸೆ ನೀಡಿದ ನಂತರ ಮನವಿ ನೀಡಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಅವೈಜ್ಞಾನಿಕ ಪ್ಯಾಕೇಜ್ ಮೋಸ ‘ಅರಣ್ಯ ಇಲಾಖೆ ಅವೈಜ್ಞಾನಿಕ ಪ್ಯಾಕೇಜ್ ನೀಡಿ ಜನರಿಗೆ ಮೊಸ ಮಾಡುತ್ತಿದೆ. ಯಾರಿಗೂ ಪ್ಯಾಕೇಜ್ ಆಮಿಷ ನೀಡಬಾರದು. ಪುನರ್ವಸತಿ ಕಾರ್ಯಕ್ರಮದಲ್ಲಿ ಎನ್‍ಜಿಒಗಳು ಮಧ್ಯೆ ಪ್ರವೇಶಿಸಬಾರದು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.