ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಅರ್ಜಿ ಪರಿಶೀಲನೆ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅವರಿಗೆ ಮನವಿ ಸಲ್ಲಿಸಲಾಯಿತು
ಅಂಕೋಲಾ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯತೆ ಮಾಡಲು ಗುರುವಾರ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಸಲಾದ ಅರ್ಜಿ ಪರಿಶೀಲನೆ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅವರಿಗೆ ಮನವಿ ಸಲ್ಲಿಸಲಾಯಿತು.
‘ಅರಣ್ಯವಾಸಿಗಳ ಅರ್ಜಿ ಪರಿಶೀಲನೆಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಮೂರು ತಲೆಮಾರುಗಳ ಹಿಂದಿನ ದಾಖಲೆಗಳನ್ನು ತರಲು ತಿಳಿಸಲಾಗಿದೆ. ಬ್ರಿಟಿಷ್ ಸರ್ಕಾರದ ಕಾಲದ ದಾಖಲೆಗಳನ್ನು ಒದಗಿಸಲು ಅರಣ್ಯ ಅತಿಕ್ರಮಣದಾರರಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೇ ಯಾವುದೇ ಜನಪ್ರತಿನಿಧಿ ಇಲ್ಲದೇ ಅರ್ಜಿಗಳ ಪರಿಶೀಲನೆ ಮತ್ತು ಹೊಸ ಮಾನದಂಡಗಳ ಹೇರಿಕೆ ಒಪ್ಪಲು ಸಾಧ್ಯವಿಲ್ಲ’ ಎಂದು ಸಂಘವು ಪ್ರತಿಪಾದಿಸಿತು.
‘ಗ್ರಾಮ ಅರಣ್ಯ ಸಮಿತಿ ಅನುಮೋದಿಸಿರುವ ರೈತರ ಅರ್ಜಿಗಳನ್ನು ಯಾವುದೇ ಷರತ್ತಿಲ್ಲದೇ ಅನುಮೋದಿಸಿ, ಹಕ್ಕು ಪತ್ರ ನೀಡಬೇಕು. 2006ರ ವರೆಗಿನ ಎಲ್ಲಾ ಅತಿಕ್ರಮಣದಾರರ ಅರ್ಜಿಗಳನ್ನು ಮಾನ್ಯ ಮಾಡಬೇಕು. ವಿನಾಯತಿ ಕೋರಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಬರೆದ ಪತ್ರ ಪರಿಗಣಿಸಿ ಅರ್ಜಿಯ ತೀರ್ಮಾನ ಮಾಡಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪ್ರಮುಖರಾದ ಜಿ.ಎಂ.ಶೆಟ್ಟಿ, ರಮಾನಂದ ನಾಯಕ, ಮಾದೇವ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.