ADVERTISEMENT

ಹೋರಾಟದ ದಿಕ್ಕು ತಪ್ಪಿಸಿದ ಕೊಳ್ಳ ಸಂರಕ್ಷಣಾಸಮಿತಿ: ರವೀಂದ್ರ ನಾಯ್ಕ ಆರೋಪ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:41 IST
Last Updated 7 ಆಗಸ್ಟ್ 2022, 7:41 IST
ರವೀಂದ್ರ ನಾಯ್ಕ
ರವೀಂದ್ರ ನಾಯ್ಕ   

ಶಿರಸಿ: ‘ಬೇಡ್ತಿ-ವರದಾ ನದಿ ಜೋಡಣೆಯ ಯೋಜನೆಗೆ ಸರ್ಕಾರ ಸ್ಥಗಿತಗೊಳಿಸಿಲ್ಲ. ವಿಸ್ತೃತ ಯೋಜನಾ ವರದಿ ಪ್ರಕ್ರಿಯೆ ಪ್ರಗತಿಯಲ್ಲಿರುವ ವೇಳೆ ಮುಖ್ಯಮಂತ್ರಿಯವರು ಯೋಜನೆ ಕೈಗೆತ್ತಿಕೊಂಡಿಲ್ಲ ಹಾಗೂ ಜಾರಿ ಮಾಡಲು ಮುಂದಾಗಿಲ್ಲ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹೇಳಿಕೆ ನೀಡಿ ಯೋಜನೆ ವಿರುದ್ಧದ ಹೋರಾಟದ ದಿಕ್ಕು ತಪ್ಪಿಸುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಆರೋಪಿಸಿದ್ದಾರೆ.

‘ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರನ್ನ ವಿಚಾರಿಸಿದ ವೇಳೆ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಪ್ರಕ್ರಿಯೆಗೆ ಸಂಬಂಧಿಸಿ ಯಾವುದೇ ಸ್ಥಗಿತ ಕಾರ್ಯ ಜರುಗಿಲ್ಲ ಎಂದು ತಿಳಿಸಿದ್ದಾರೆ. ಜನಪ್ರತಿನಿಧಿಗಳ ಭರವಸೆ ನಂಬಿ ಯೋಜನೆ ವಿರುದ್ಧ ಹೋರಾಟ ನಡೆಸಿದ್ದ ಕೊಳ್ಳ ಸಮಿತಿ ಹೇಳಿಕೆ ನೀಡಿ ಹೋರಾಟದಿಂದ ಹಿಂದೆ ಸರಿದಿದ್ದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಯೋಜನೆ ಸ್ಥಗಿತಗೊಳಿಸಿ ಸರ್ಕಾರ ಲಿಖಿತ ಆದೇಶ ಹೊರಡಿಸುವವರೆಗೂ ಹೋರಾಟದಿಂದ ಹಿಂದೆ ಸರಿಯಬಾರದಿತ್ತು. ಅದರ ಬದಲು ಜಿಲ್ಲೆಯ ಜನಪ್ರತಿನಿಧಿಗಳ ರಕ್ಷಣೆ ಕಾರ್ಯದಲ್ಲಿ ಸಮಿತಿ ಮುಂದಾಗಿದ್ದು ಬೇಸರ ತಂದಿದೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ಅರಣ್ಯವಾಸಿಗಳ ಸಮಸ್ಯೆ, ಅಭಯಾರಣ್ಯ, ಕಸ್ತೂರಿ ರಂಗನ್ ವರದಿಯಿಂದ ಉಂಟಾಗುವ ಅನಾಕೂಲ, ನಿರಾಶ್ರಿತರ ಸಮಸ್ಯೆಗಳೊಂದಿಗೆ ಇಂದು ಬೇಡ್ತಿ ಯೋಜನೆ ಸಮಸ್ಯೆಗಳ ಪಟ್ಟಿಗೆ ಸೇರಲ್ಪಟ್ಟಿದೆ. ಜಿಲ್ಲೆಯ ಜನಪ್ರತಿನಿಧಿಗಳು ಶೀಘ್ರದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ನದಿ ಜೋಡಣೆ ಯೋಜನೆಗೆ ಸ್ಥಗಿತಗೊಳಿಸುವ ಆದೇಶ ಜಾರಿಗೆ ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.