ADVERTISEMENT

ಹಕ್ಕುಪತ್ರ: ಆಮರಣಾಂತ ಉಪವಾಸದ ಎಚ್ಚರಿಕೆ

ಕಾರವಾರ: ಅರಣ್ಯ ಅತಿಕ್ರಮಣಕಾರರಿಂದ ಬೃಹತ್ ಪ್ರತಿಭಟನೆ, ಸಾವಿರಾರು ಜನರಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:27 IST
Last Updated 6 ಫೆಬ್ರುವರಿ 2019, 14:27 IST
ಕಾರವಾರದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯಕ ಮಾತನಾಡಿದರು.
ಕಾರವಾರದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯಕ ಮಾತನಾಡಿದರು.   

ಕಾರವಾರ:‘ಅರಣ್ಯ ಹಕ್ಕುಪತ್ರ ನೀಡುವ ಕುರಿತು ಉನ್ನತಮಟ್ಟದ ಅಧಿಕಾರಿಗಳ ಸಭೆಗೆ ದಿನಾಂಕ ನಿರ್ಧರಿಸಬೇಕು. ಇಲ್ಲದಿದ್ದರೆ ಆಮರಣಾಂತ ಉಪವಾಸಆರಂಭಿಸಲಾಗುವುದು’ ಎಂದುಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯಕ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹಕ್ಕುಪತ್ರ ನೀಡುವಂತೆ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಧರಣಿ ಕುಳಿತ ಪ್ರತಿಭಟನಾಕಾರರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಭೇಟಿ ಮಾಡಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಫೆ.23ರ ಮೊದಲು ಸಭೆಗೆಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಆದರೆ, ಇದಕ್ಕೆ ಒಪ್ಪದೇ ಫೆ.12ರಂದು ‘ಬೆಂಗಳೂರು ಚಲೋ’ ಹಮ್ಮಿಕೊಳ್ಳುವುದಾಗಿ ರವೀಂದ್ರ ನಾಯಕ ಪ್ರಕಟಿಸಿದರು.

ADVERTISEMENT

ಚುನಾವಣೆ ಬಹಿಷ್ಕಾರದ ಎಚ್ಚರಿಕೆ:‘ಅತಿಕ್ರಮಣಕಾರರಿಗೆ ಹಕ್ಕುಪತ್ರ ಕೊಡುವ ವಿಚಾರ ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳಿಗೆ ನೆನಪಾಗುತ್ತದೆ. ಆದರೆ, ನಂತರ ಈ ವಿಷಯ ಅವರಿಗೆ ಬೇಡದ ಕೂಸಾಗುತ್ತದೆ. ನಾವು ಅವರಿಗೆ ಬೇಡ ಎಂದಾದರೆ ನಮಗೂ ಅವರು ಬೇಡ. ಹಾಗಾಗಿ ಈ ಬಾರಿಯಲೋಕಸಭಾ ಚುನಾವಣೆಯನ್ನು ನಾವು ಯಾಕೆ ಬಹಿಷ್ಕರಿಸಬಾರದು’ ಎಂದು ಅವರು ಪ್ರಶ್ನಿಸಿದರು.

‘ಅಧಿಕಾರಿಗಳಿಗೆ ತಾಕತ್ತಿದ್ದರೆ ದೊಡ್ಡ ಕುಳಗಳು ಮಾಡಿರುವ ಒತ್ತುವರಿಯನ್ನು ಮೊದಲು ತೆರವು ಮಾಡಿ. ನಂತರ ಸಣ್ಣಪುಟ್ಟ ಬಡವರ ಬಳಿಗೆ ಬನ್ನಿ’ ಎಂದು ಸವಾಲೆಸೆದರು.

‘ಹತ್ತಾರು ದಶಕಗಳಿಂದ ನಾವಿರುವ ಜಾಗ ಒತ್ತುವರಿ ಭೂಮಿ ಎಂದು ಗೊತ್ತಿದ್ದರೂ ಅಧಿಕಾರಿಗಳು ವಿದ್ಯುತ್, ನೀರು, ರಸ್ತೆ ಮುಂತಾದ ಸೌಕರ್ಯಗಳನ್ನು ಕೊಟ್ಟಿದ್ದಾರೆ. ಈಗ ಏಕಾಏಕಿ ತೆರವು ಮಾಡಲು ಮನೆಯೆಂದರೆ ಕಡ್ಡಿ ಪೆಟ್ಟಿಗೇನಾ? ವಯಸ್ಸಾದ ಸಂದರ್ಭದಲ್ಲಿ ನಾವೆಲ್ಲ ಎಲ್ಲಿಗೆ ಹೋಗೋಣ? ಹಾಗಾಗಿ ಅಗತ್ಯವಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಆದರೆ, ಜಮೀನು ಮಾತ್ರ ಬಿಡುವುದಿಲ್ಲ’ ಎಂದರು.

‘ಗೆದ್ದವರಿಗೆ ಎಚ್ಚರವಾಗಿಲ್ಲ’:‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರುವೇದಿಕೆಯ ಮೇಲಿದ್ದೇವೆ. ಆದರೆ, ಗೆದ್ದವರಿಗೆ ಇನ್ನೂ ಎಚ್ಚರವಾಗಿಲ್ಲ’ ಎಂದು ರವೀಂದ್ರ ನಾಯಕ ಟೀಕಿಸಿದರು.

‘ನಾನೂ ಯಲ್ಲಾಪುರದಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡು ಸೋತೆ. ಆದರೆ, ಗೆದ್ದವರಿಗೆ ಅರಣ್ಯ ಹಕ್ಕಿನ ವಿಚಾರದಲ್ಲಿ ಎಚ್ಚರಿಕೆ ನೀಡದೇ ಬಿಡುವುದಿಲ್ಲ. ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಜನಪ್ರತಿನಿಧಿಗಳ ಮನೆಗಳ ಮುಂದೆ ಧರಣಿ ಕೂರುತ್ತೇವೆ’ ಎಂದು ಹೇಳಿದರು.

ವೇದಿಕೆಯಭಟ್ಕಳ ತಾಲ್ಲೂಕು ಘಟಕದ ಅಧ್ಯಕ್ಷ ರಾಮ ಮೊಗೇರ ಮಾತನಾಡಿ, ‘ನಾವು ಜನಿಸಿ, ಗಿಡ ನೆಟ್ಟು ಬೆಳೆಸಿದ ನೆಲದಿಂದ ನಮ್ಮನ್ನು ಖಾಲಿ ಮಾಡಿಸಲು ಅಧಿಕಾರಿಗಳು ಯಾರು? ಇದು ನಮ್ಮ ಭೂಮಿ. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಹಕ್ಕುಪತ್ರ ಕೊಡಲು ಮುಂದಾಗಿತ್ತು. ಆದರೆ, ಈಗಿನ ಕೇಂದ್ರ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ’ ಎಂದು ದೂರಿದರು.

‘ಟಿಬೆಟ್‌ನಿಂದ ಬಂದವರಿಗೆ ನಮ್ಮ ಜಿಲ್ಲೆಯಲ್ಲಿ ಆಶ್ರಯ ನೀಡಿ ಜಮೀನು ಪಟ್ಟಾ ಮಾಡಿಕೊಡಲಾಗಿದೆ. ಆದರೆ, ಇಲ್ಲಿನವರೇ ಆಗಿರುವ ನಮಗೆ ಆ ಹಕ್ಕು ಯಾಕಿಲ್ಲ’ ಎಂದು ಪ್ರಶ್ನಿಸಿದರು.

ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಮಾತನಾಡಿ, ಹಕ್ಕುಪತ್ರ ಸಿಗುವವರೆಗೂ ಹೋರಾಟ ನಿಲ್ಲಿಸುವುದು ಬೇಡ. ಸಂಘಟನೆಯ ಮೂಲಕ ಶಕ್ತಿ ಪ್ರದರ್ಶನ ಮಾಡಲು ಮುಂದಾಗಬೇಕು. ಸರ್ಕಾರಕ್ಕೆ ಇದುವೇ ಕೊನೆಯ ಎಚ್ಚರಿಕೆಯಾಗಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಸತೀಶ್ ಸೈಲ್, ಭಟ್ಕಳದ ತಂಜೀಮ್ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, ಉಪಾಧ್ಯಕ್ಷ ಅಲ್ತಾಫ್ ಖರೂರಿ, ಕುಮಟಾದ ಮುಖಂಡ ಸೂರಜ್ ನಾಯ್ಕ ಸೋನಿ,ಶಿರಸಿಯ ಜಿಲ್ಲಾ ರಕ್ಷಣಾ ಸಮಿತಿ ಅಧ್ಯಕ್ಷೆ ಶ್ಯಾಮಲಾ ನಾಯಕ ಹಾಗೂ ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.