ADVERTISEMENT

ಉತ್ತರ ಕನ್ನಡ: ಎಸ್.ಪಿ ವರ್ಗಾವಣೆ ವಿರೋಧ: ಪ್ರತಿಭಟನೆ

ಸಂಘಟನೆಗಳಿಂದ ಧರಣಿ, ಸಮುದ್ರಕ್ಕಿಳಿದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿ ಒಕ್ಕೂಟದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 15:48 IST
Last Updated 4 ನವೆಂಬರ್ 2022, 15:48 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಅವರ ವರ್ಗಾವಣೆಯನ್ನು ಖಂಡಿಸಿ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಕಾರವಾರ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಸಮುದ್ರಕ್ಕಿಳಿದು ಪ್ರತಿಭಟನೆ ನಡೆಸಿದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಅವರ ವರ್ಗಾವಣೆಯನ್ನು ಖಂಡಿಸಿ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಕಾರವಾರ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಸಮುದ್ರಕ್ಕಿಳಿದು ಪ್ರತಿಭಟನೆ ನಡೆಸಿದರು   

ಕಾರವಾರ: ಜಿಲ್ಲಾ ‍ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನ್ ಪೆನ್ನೇಕರ್ ಅವರ ವರ್ಗಾವಣೆಗೆ ವಿವಿಧ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಸರ್ಕಾರದ ಆದೇಶವನ್ನು ಹಿಂಪಡೆಯಬೇಕು ಎಂದು ನಗರದಲ್ಲಿ ಶುಕ್ರವಾರ ಪ್ರತಿಭಟನೆಗಳು ನಡೆದವು.

ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ನೇತೃತ್ವದಲ್ಲಿ ಯುವಕರು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಂಡರು. ಸಮುದ್ರದ ನೀರಿಗೆ ಇಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದಕ್ಷ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಲ್ಪಾವಧಿಯಲ್ಲೇ ವರ್ಗಾವಣೆ ಮಾಡುವ ಮೂಲಕ ಸರ್ಕಾರದ ಧೋರಣೆಗಳು ಬಯಲಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವು ಅವರ ವರ್ಗಾವಣೆಯನ್ನು ರದ್ದು ಮಾಡಿ ಮತ್ತಷ್ಟು ಸಮಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡಬೇಕು. ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿದ್ದ ಸುಮನ್ ಪೆನ್ನೇಕರ್ ಅವರು ಜಿಲ್ಲೆಗೆ ಅಗತ್ಯವಾಗಿದ್ದಾರೆ ಎಂದು ಆಗ್ರಹಿಸಿದರು.

ADVERTISEMENT

ಕ.ರ.ವೇ ಧರಣಿ: ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಕಾರವಾರ ತಾಲ್ಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಹಮ್ಮಿಕೊಂಡರು. ಸರ್ಕಾರವು ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ವರ್ಗಾವಣೆ ಮಾಡಿದ್ದನ್ನು ಖಂಡಿಸಿದರು. ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಅಕ್ಷಯ.ಎಸ್.ಬಿ ನೇತೃತ್ವ ವಹಿಸಿದ್ದರು.

‘ಜನ ಎಚ್ಚೆತ್ತುಕೊಳ್ಳಲಿ’: ‘ಡಾ.ಸುಮನ್ ಪೆನ್ನೇಕರ್ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿದ್ದರು. ಆದ್ದರಿಂದಲೇ ಅವರು ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಆಗುವಷ್ಟರಲ್ಲೇ ವರ್ಗಾವಣೆಯಾಗಿದ್ದಾರೆ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಎದುರಾಗಿದೆ’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.

‘ಪೆನ್ನೇಕರ್ ಅವರು ಮಟ್ಕಾ, ಗಾಂಜಾದಂಥ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿದ್ದರು. ಚುನಾವಣೆ ಸಮೀಪಿಸಿರುವ ಕಾರಣ ದಕ್ಷ, ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ. ಆಡಳಿತ ಪಕ್ಷದ ಕೆಲವರೇ ಈ ಚಟುವಟಿಕೆಗಳಲ್ಲಿ ಇರುವ ಕಾರಣ, ಇವರ ವರ್ಗಾವಣೆ ತಡೆಗೆ ಕೋರಿ ಹೆಚ್ಚಿನ ಒತ್ತಡ ಹೇರಿದರೂ ಪ್ರಯೋಜನವಿರಲಿಲ್ಲ ಎಂಬುದು ನಮ್ಮ ಅರಿವಿಗೆ ಬಂದಿತ್ತು. ಹೀಗಾಗಿ ಈ ಬಗ್ಗೆ ಜನರೇ ಎಚ್ಚೆತ್ತುಕೊಳ್ಳಬೇಕು. ಆಡಳಿತ ಹೇಗಿದೆ ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.