ಹಳಿಯಾಳ: ‘ಸ್ವಚ್ಛತೆ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ ಸಾರ್ವಜನಿಕರೂ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಇಲ್ಲಿನ ಪುರಭವನದಲ್ಲಿ ಹಳಿಯಾಳ, ದಾಂಡೇಲಿ, ಜೋಯಿಡಾ ಭಾಗದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿ ಸೋಮವಾರ ಮಾತನಾಡಿದರು.
‘ಜನಪ್ರತಿನಿಧಿಗಳು ಆಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರತಿ ವಾರ್ಡ್‌ಗಳಲ್ಲಿ ಸಂಚರಿಸಿ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ. ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ. ಗ್ರಾಮ, ಓಣಿ, ಬಡಾವಣೆಗಳಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಕೋವಿಡ್‌ಗೆ ಆಮಂತ್ರಣ ನೀಡಿದಂತೆ. ಈಗಾಗಲೇ ಸರ್ಕಾರ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.
‘ಸ್ವಚ್ಛತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ. ರಸ್ತೆ ಅಕ್ಕಪಕ್ಕದ ಕಾಲುವೆಗಳಲ್ಲಿ ಕಸ ಚೆಲ್ಲಿದರೆ ಅಂತವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಿ. ಪಟ್ಟಣದಲ್ಲಿ ಪುರಸಭೆ, ಪೊಲೀಸ್ ಹಾಗೂ ತಹಶೀಲ್ದಾರ್ ಸೇರಿ ಪ್ರತಿ ವಾರ್ಡ್‌ಗಳಲ್ಲಿ ದಿನಂಪ್ರತಿ ವಾರ್ಡ್ ಸದಸ್ಯರೊಂದಿಗೆ ಸ್ವಚ್ಛತೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ’ ಎಂದರು.
‘ಕೋವಿಡ್ ಪತ್ತೆಗಾಗಿ ಜಿಲ್ಲೆಯ ಸ್ಯಾಂಪಲ್‌ಗಳನ್ನು ಶಿವಮೊಗ್ಗಕ್ಕೆ ರವಾನಿಸಲು ತಿಳಿಸಿದ್ದು, ಅದರಿಂದ ವರದಿ ಬರಲು ತಡವಾಗಬಹುದು. ಕಾರವಾರ ಅಥವಾ ಶಿರಸಿಗೆ ಕೋವಿಡ್ ಸ್ಯಾಂಪಲ್ ತಪಾಸಣಾ ಕೇಂದ್ರ ತೆರೆಯಬೇಕೆಂದು ಆರೋಗ್ಯ ಸಚಿವರಲ್ಲಿ ವಿನಂತಿಸಿದ್ದೇನೆ’ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಬೆಂಡಿಗೇರಿಮಠ ಗೌಳಿ ಕೆರೆ ಸ್ವಚ್ಛತೆಯ ಕುರಿತು, ಸುರೇಶ್ ಕೋಕಿತ್ಕರ ಶಾಸಕರ ಮಾದರಿ ಶಾಲೆ ನಂ1 ಕಾಲುವೆ ಸ್ವಚ್ಛತೆಯ ಕುರಿತು, ಶಿವಾನಂದ ಕಮ್ಮಾರ ಗ್ರಾಮೀಣ ಭಾಗದ ಸ್ವಚ್ಛತೆಯ ಕುರಿತು, ಶಿರಾಜ್ ಮುನವಳ್ಳಿ ಹಾಗೂ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಜಿ.ಡಿ ಗಂಗಾಧರ್ ತಮ್ಮ ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮಿ ವಡ್ಡರ, ದಾಂಡೇಲಿ ನಗರಸಭೆ ಅಧ್ಯಕ್ಷ ಅಸ್ಪಾಕ ಶೇಖ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ದಾಂಡೇಲಿ ತಹಶೀಲ್ದಾರ್ ಪರಮಾನಂದ ಶೈಲೇಶ, ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.