ADVERTISEMENT

‘ಬಹುಗ್ರಾಮ’ಕ್ಕೆ ಇನ್ನೂ ಹರಿಯದ ಶುದ್ಧ ನೀರು

ಬಹುನಿರೀಕ್ಷಿತ ಯೋಜನೆ ನಿಧಾನವಾಗಿ ಪೂರ್ಣಗೊಂಡರೂ ಗ್ರಾಮಸ್ಥರಿಗೆ ಸಿಗದ ಪ್ರಯೋಜನ

ಸದಾಶಿವ ಎಂ.ಎಸ್‌.
Published 26 ಏಪ್ರಿಲ್ 2019, 20:00 IST
Last Updated 26 ಏಪ್ರಿಲ್ 2019, 20:00 IST
‘ಕೆರವಡಿ ಬಹುಗ್ರಾಮ ಕುಡಿಯುವ ನೀರು ಯೋಜನೆ’ಯಡಿ ನಿರ್ಮಾಣ ಮಾಡಲಾಗಿರುವ ಬೃಹತ್ ಟ್ಯಾಂಕ್
‘ಕೆರವಡಿ ಬಹುಗ್ರಾಮ ಕುಡಿಯುವ ನೀರು ಯೋಜನೆ’ಯಡಿ ನಿರ್ಮಾಣ ಮಾಡಲಾಗಿರುವ ಬೃಹತ್ ಟ್ಯಾಂಕ್   

ಕಾರವಾರ:ಉಪ್ಪು ನೀರಿನಿಂದ ತೊಂದರೆಗೊಳಗಾದ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ‘ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ವಿವಿಧ ಗ್ರಾಮ ಪಂಚಾಯ್ತಿಗಳಿಂದ ಮನೆಗಳಿಗೆ ಪೈಪ್ ಅಳವಡಿಸುವ ಕಾರ್ಯ ಬಾಕಿಯಿದೆ.ಹಾಗಾಗಿ ಗ್ರಾಮಸ್ಥರು ಮತ್ತಷ್ಟು ದಿನ ಕಾಯುವಂತಾಗಿದೆ.

ಬಹುನಿರೀಕ್ಷಿತ ಈ ಕಾಮಗಾರಿಗೆ 2013ರ ಜನವರಿಯಲ್ಲಿ ಚಾಲನೆ ನೀಡಲಾಗಿತ್ತು.ಕೆರವಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಳಿ ನದಿಗೆಪಂಪ್‌ಗಳನ್ನು ಅಳವಡಿಸಿ ಸಮೀಪದ ಗುಡ್ಡದ ಮೇಲಿರುವ ಟ್ಯಾಂಕ್‌ಗೆ ನೀರು ಹರಿಸಲಾಗುತ್ತಿದೆ. ಅಲ್ಲಿಂದ ಶುದ್ಧೀಕರಿಸಿದ ನೀರನ್ನು ಸುಮಾರು 35 ಸಾವಿರ ಜನರಿಗೆ ಪೈಪ್‌ಗಳ ಮೂಲಕ ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದೆ.

ಗ್ರಾಮ ಪಂಚಾಯ್ತಿಗಳಿಗೆ ಪೈಪ್‌ಲೈನ್ ಅಳವಡಿಕೆ, ದೊಡ್ಡ ಟ್ಯಾಂಕ್‌ಗಳ ನಿರ್ಮಾಣ ಪೂರ್ಣಗೊಂಡಿದ್ದು ಬಳಕೆಯಲ್ಲಿವೆ. ಕೆರವಡಿಯಿಂದ ಶಿರವಾಡದವರೆಗೆ ರಾಜ್ಯ ಹೆದ್ದಾರಿಯ ಅಂಚಿನಲ್ಲಿರುವ ಮನೆಗಳಿಗೆ ಮಾತ್ರ ಪ್ರಸ್ತುತ ಈ ಯೋಜನೆಯ ನೀರು ಸಿಗುತ್ತಿದೆ.‘ಸಿದ್ದ

ADVERTISEMENT

ರ ಗ್ರಾಮದಿಂದ ಮೇಲ್ಭಾಗದಲ್ಲಿ ನೀರು ಬರುತ್ತಿಲ್ಲ. ಗ್ರಾಮದ ಅಶ್ವಿನಿ ದೇವಸ್ಥಾನದಸುತ್ತಮುತ್ತ ಪೈಪ್‌ಲೈನ್ ಸಂಪರ್ಕವಿದೆ. ಇತ್ತ ಕಿನ್ನರ, ಸಿದ್ದವಾಡ, ಆಚಾರಿವಾಡಾ, ಜನತಾ ಪ್ಲಾಟ್ ಸುತ್ತಮುತ್ತ ರಸ್ತೆಯ ಅಂಚಿನಲ್ಲೇ ಪೈಪ್‌ಲೈನ್ ಇದೆ. ಆದರೆ, ಸಮೀಪದ ಮನೆಗಳಿಗೆ ಅದರಿಂದ ನೀರು ಕೊಟ್ಟಿಲ್ಲ. ನಮಗೆ ಗ್ರಾಮ ಪಂಚಾಯ್ತಿಯಿಂದ ವಾರಕ್ಕೊಮ್ಮೆ ಕುಡಿಯುವ ನೀರು ಕೊಡುತ್ತಾರೆ. ಗ್ರಾಮ ಪಂಚಾಯ್ತಿಯ ಬಾವಿಯಲ್ಲೇ ನೀರು ಇಂಗಿದೆ. ಹಾಗಾಗಿ ಈ ಯೋಜನೆಯಿಂದ ಎಲ್ಲರಿಗೂ ಅನುಕೂಲ ಆಗಬೇಕು’ ಎನ್ನುವುದು ವೈಲವಾಡದ ಗ್ರಾಮಸ್ಥ ಕೃಷ್ಣಾನಂದ ಅವರ ಒತ್ತಾಯವಾಗಿದೆ.

ಗ್ರಾಮದ ಒಳಗೆ ಪೈಪ್‌ಲೈನ್‌ ಅಳವಡಿಸುವವರೆಗೂ ಈ ಸಮಸ್ಯೆ ಮುಂದುವರಿಯಲಿದೆ. ಆದರೆ, ಅದಕ್ಕೆ ಗ್ರಾಮ ಪಂಚಾಯ್ತಿಗಳಿಗೆ ಬರುವ ಅನುದಾನ ಸಾಕಾಗುವುದಿಲ್ಲ ಅಧಿಕಾರಿಯೊಬ್ಬರು.

ಟ್ಯಾಂಕ್ ನಿರ್ಮಾಣ ಬಾಕಿ:‘ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸಬೇಕು, ಎರಡು ಟ್ಯಾಂಕ್‌ಗಳ ನಿರ್ಮಾಣ ಆಗಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿ ಮುಂದುವರಿಯಬೇಕು. ಆದರೆ, ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸ್ವಲ್ಪ ದಿನ ಕಾಯಬೇಕಾಗಿದೆ. ಮೇ ತಿಂಗಳ ನಂತರ ಈ ಕಾರ್ಯ ಮಾಡಲಾಗುವುದು’ ಎಂದು ಕಿನ್ನರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಂದ್ರ ಕೊಠಾರಕರ್ ತಿಳಿಸಿದರು.

ನೈಜ ಸಮಸ್ಯೆಯೇನು?:ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಖಾರ್ಗಾದಲ್ಲಿ ಒಂದು ಟ್ಯಾಂಕ್‌ ಅನ್ನು ದುರಸ್ತಿ ಮಾಡಲಾಗಿದೆ. ಸಿದ್ದರದಲ್ಲಿ ಒಂದು ಟ್ಯಾಂಕ್ ನಿರ್ಮಾಣಕ್ಕೆ ಪ್ರಸ್ತಾವನೆಕಳುಹಿಸಲಾಗುತ್ತದೆ. ಅಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆಯೂ ಇದೆ. ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್ ಆರ್.ಎನ್.ತಾಂಡೇಲ್ತಿಳಿಸಿದ್ದಾರೆ.

ಅಂಬೇಡ್ಕರ್ ಕಾಲೊನಿಯಲ್ಲಿ ಟ್ಯಾಂಕ್ ಇದೆ. ಅದಕ್ಕೂ ಈ ವಾರ ನೀರಿನ ಸಂಪರ್ಕ ನೀಡಲಾಗುತ್ತದೆ. ಕಿನ್ನರದಲ್ಲಿ ಕರಿದೇವ ದೇವಸ್ಥಾನದಿಂದ ಕೊತ್ಲವಾಡಾಕ್ಕೆ 4.5 ಕಿ.ಮೀ ಉದ್ದ ಪೈಪ್ ಅಳವಡಿಸಲು ₹ 17 ಲಕ್ಷ ಅಗತ್ಯವಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರುಯೋಜನೆಯಡಿ(ಎನ್‌ಆರ್‌ಡಿಡಬ್ಲ್ಯುಪಿ) ₹ 10 ಲಕ್ಷ ಹಾಗೂ ಟಾಸ್ಕ್‌ಫೋರ್ಸ್ ಮೂಲಕ ₹ 4 ಲಕ್ಷ ಮೀಸಲಿಡಲಾಗಿದೆ. ಇದಾದರೆ ಗರಿಷ್ಠ ಸಂಖ್ಯೆಯ ಮನೆಗಳಿಗೆ ನೀರು ಸಿಗಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.