ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಉತ್ತರ ಕನ್ನಡದ ಮಂಜುನಾಥ ತಿಪ್ಪಣ್ಣ ಹರಿಜನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಮುಂಡಗೋಡದ ಪೌರಸಿಬ್ಬಂದಿ ಮಂಜುನಾಥ ಹರಿಜನ
ಮುಂಡಗೋಡದ ಪೌರಸಿಬ್ಬಂದಿ ಮಂಜುನಾಥ ಹರಿಜನ   

ಮುಂಡಗೋಡ (ಉತ್ತರ ಕನ್ನಡ): ‘ಕೋವಿಡ್ ಹೆಸರು ಕೇಳಿದರೆ ಎಲ್ಲರೂ ಹೆದರುತ್ತಿದ್ದರು. ಮನೆಯಲ್ಲಿ ಕೆಲಸಕ್ಕೆ ಹೋಗುವುದೇ ಬೇಡ ಎನ್ನುತ್ತಿದ್ದರು. ಕೆಲಸ ಬಿಟ್ಟರೆ ಜೀವನ ನಡೆಯುವುದಿಲ್ಲ. ಅದು ಮನೆಯವರಿಗೂ ಗೊತ್ತಿತ್ತು. ಕೆಲಸ ಮಾಡುವುದು ಅನಿವಾರ್ಯ ಎಂದುಕೊಂಡು, ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿದ್ದೆ...’

ಪಟ್ಟಣದ ಪೌರಸಿಬ್ಬಂದಿ ಮಂಜುನಾಥ ತಿಪ್ಪಣ್ಣ ಹರಿಜನ, ಲಾಕ್‍ಡೌನ್ ನಂತರದ ದಿನಗಳನ್ನು ನೆನಪಿಸಿಕೊಂಡರು.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ನೇರ ಪಾವತಿ ಅಡಿ ಪೌರ ಸಿಬ್ಬಂದಿಯಾಗಿ ಆರು ವರ್ಷಗಳಿಂದ ಅವರು ಕೆಲಸ ಮಾಡುತ್ತಿದ್ದಾರೆ. ಸತತ ಮೂರು ತಿಂಗಳು ಕ್ವಾರಂಟೈನ್ ಕೇಂದ್ರಗಳು, ಕೋವಿಡ್ ಸೋಂಕಿತರ ಮನೆಗಳಿಗೆ ಸ್ಯಾನಿಟೈಸೇಷನ್ ಮಾಡಿ, ಅಲ್ಲಿನ ತ್ಯಾಜ್ಯ ಸಂಗ್ರಹಿಸುತ್ತ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ADVERTISEMENT

ಬಹುತೇಕರು ಕೊರೊನಾಕ್ಕೆ ಹೆದರಿ ಮನೆಯಲ್ಲಿ ಕೂರುತ್ತಿದ್ದ ಸಮಯದಲ್ಲಿ, ಹಿಂದೆಮುಂದೆ ನೋಡದೇ ‘ಕೊರೊನಾ ಯೋಧ’ರಾಗಿ ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನು ಗುರುತಿಸಿ ತಾಲ್ಲೂಕು ಆಡಳಿತವು ಸ್ವಾತಂತ್ರ್ಯೋತ್ಸವದಂದು ಸನ್ಮಾನಿಸಿದೆ.

‘ಹೊರರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗುವರ ಸಂಖ್ಯೆ ಹೆಚ್ಚಲು ಆರಂಭವಾಯಿತು. ಪಟ್ಟಣದ ವಸತಿ ನಿಲಯ, ಪ್ರಥಮ ದರ್ಜೆ ಕಾಲೇಜು, ಮೊರಾರ್ಜಿ ವಸತಿ ಶಾಲೆಗಳಲ್ಲಿ ಜನರು ಕ್ವಾರಂಟೈನ್ ಆದರು. ಅವರ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಲು, ಯಾರು ಹೋಗುತ್ತೀರಿ ಎಂದು ಮುಖ್ಯಾಧಿಕಾರಿಗಳು ಕೇಳಿದರು. ಕೂಡಲೇ ನಾನು ಆ ಕೆಲಸವನ್ನು ಒಪ್ಪಿಕೊಂಡೆ’ ಎಂದು ವಿವರಿಸಿದರು.

ಮುಂಡಗೋಡದ ಪೌರಸಿಬ್ಬಂದಿ ಮಂಜುನಾಥ ಹರಿಜನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸದಲ್ಲಿ ತೊಡಗಿರುವುದು

‘ಮೊದಲಿಗೆ ಹೆದರಿಕೆಯಿಂದಲೇ ಕಾಲಿಡುತ್ತ, ಕೆಲಸ ಶುರು ಮಾಡಿದ್ದೆ. ದಿನಕಳೆದಂತೆ ರೂಢಿಯಾಯಿತು. ಕ್ವಾರಂಟೈನ್ ಕೇಂದ್ರದಲ್ಲಿದ್ದವರೂ ಮಾತನಾಡಿಸುತ್ತಿದ್ದರು. ಅವರಿಗೆ ಧೈರ್ಯದ ಮಾತುಗಳನ್ನು ಹೇಳಿ ಹೊರಬರುತ್ತಿದ್ದೆ’ ಎಂದರು.

‘ವೈಯಕ್ತಿಕ ಸುರಕ್ಷತೆಯ ಸಲಕರಣೆ (ಪಿ.ಪಿ.ಇ ಕಿಟ್) ಧರಿಸಿ ಕೆಲಸ ಮಾಡಬೇಕಾಗಿದ್ದರಿಂದ ಬಹಳ ಕಷ್ಟವಾಗುತ್ತಿತ್ತು. ಒಂದು ಗಂಟೆಕಾಲ ಕಿಟ್ ಧರಿಸುತ್ತಿದ್ದರಿಂದ ಮೈಯೆಲ್ಲ ಬೆವರಿ ಒದ್ದೆಯಾಗಿರುತ್ತಿತ್ತು. ಮನೆಗೆ ಹೋಗಿ, ಬಾಗಿಲಲ್ಲಿಯೇ ಬಟ್ಟೆ ತೆಗೆದು, ಬಿಸಿ ನೀರಲ್ಲಿ ನೆನೆಯಲು ಇಡುತ್ತಿದ್ದೆ. ನಂತರ ಸ್ನಾನ ಮಾಡಿಯೇ ಮನೆಯ ಒಳಗೆ ಹೋಗುತ್ತಿದ್ದೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಿಂದ ಹೆಚ್ಚು ಜಾಗ್ರತೆ ವಹಿಸುತ್ತಿದ್ದೆ’ ಎಂದು ವಿವರಿಸಿದರು.

-ಪೌರಸಿಬ್ಬಂದಿ ಮಂಜುನಾಥ ತಿಪ್ಪಣ್ಣ ಹರಿಜನ, ಉತ್ತರ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.