ADVERTISEMENT

ಕೋರವಾರ ಕ್ವಾರಂಟೈನ್ ಕೇಂದ್ರದಲ್ಲಿ ಗಲಾಟೆ

ಉಪಾಹಾರದಲ್ಲಿ ಸತ್ತ ಹಲ್ಲಿ ಬಿದ್ದಿದೆ ಎಂಬ ಕಾರಣಕ್ಕೆ ಗದ್ದಲ

​ಪ್ರಜಾವಾಣಿ ವಾರ್ತೆ
Published 19 ಮೇ 2020, 14:14 IST
Last Updated 19 ಮೇ 2020, 14:14 IST
ಕಾಳಗಿ ತಾಲ್ಲೂಕಿನ ಕೋರವಾರ ಕ್ವಾರಂಟೈನ್ ಕೇಂದ್ರದ ಅಡುಗೆ ಸಿಬ್ಬಂದಿ ಕೇಂದ್ರದಿಂದ ಹೊರಗುಳಿದಿರುವುದು
ಕಾಳಗಿ ತಾಲ್ಲೂಕಿನ ಕೋರವಾರ ಕ್ವಾರಂಟೈನ್ ಕೇಂದ್ರದ ಅಡುಗೆ ಸಿಬ್ಬಂದಿ ಕೇಂದ್ರದಿಂದ ಹೊರಗುಳಿದಿರುವುದು   

ಕಾಳಗಿ: ತಾಲ್ಲೂಕಿನ ಕೋರವಾರ ಜವಾಹರ ನವೋದಯ ವಿದ್ಯಾಲಯದಲ್ಲಿ ತೆರೆಯಲಾದ ಕೋವಿಡ್–19 ಕ್ವಾರಂಟೈನ್ ಕೇಂದ್ರದಲ್ಲಿ ಬೆಳಗಿನ ಉಪಾಹಾರದಲ್ಲಿ ‘ಸತ್ತ ಹಲ್ಲಿ ಬಿದ್ದಿದೆ’ ಎಂಬ ಕಾರಣಕ್ಕೆ ಅಡುಗೆ ಸಿಬ್ಬಂದಿ ಮತ್ತು ವಲಸೆ ಕಾರ್ಮಿಕರ ನಡುವೆ ಗಲಾಟೆ ನಡೆದು ಸಿಬ್ಬಂದಿ ಮಂಗಳವಾರ ಮಧ್ಯಾಹ್ನದ ಅಡುಗೆ ಮಾಡದೇ ದೂರ ಉಳಿದರು.

ಮಹಾರಾಷ್ಟ್ರದ 562 ವಲಸೆ ಕಾರ್ಮಿಕರಿರುವ ಇಲ್ಲಿ ಬೆಳಿಗ್ಗೆ ಉಪಹಾರಕ್ಕೆಂದು ಅವಲಕ್ಕಿ ಸುಸಲಾ ತಯಾರಿಸಲಾಗಿತ್ತು. ವಲಸೆ ಕಾರ್ಮಿಕರು ಉಪಹಾರ ಬಡಿಸಿಕೊಂಡು ಅವರವರ ಜಾಗಕ್ಕೆ ತೆರಳಿ ಉಪಾಹಾರ ಮಾಡುತ್ತಿದ್ದರು. ಇತ್ತ ಅಡುಗೆ ಸಿಬ್ಬಂದಿ ಮಧ್ಯಾಹ್ನದ ಊಟಕ್ಕಾಗಿ ಚಪಾತಿ, ಬದನೆಕಾಯಿ ಪಲ್ಯ ಮಾಡುವ ಸಿದ್ಧತೆಯಲ್ಲಿದ್ದರು. ಇನ್ನೇನು ಉಪಾಹಾರ ಮುಗಿಯುತ್ತಿದ್ದಂತೆ ಕೊನೆಕ್ಷಣದಲ್ಲಿ ದಿಢೀರನೆ ಶುರುವಾದ ಜಗಳದಲ್ಲಿ ‘ಅವಲಕ್ಕಿ ಸುಸಲಾದಲ್ಲಿ ಸತ್ತ ಹಲ್ಲಿ ಬಿದ್ದಿದೆ’ ಎಂದು ವಲಸೆ ಕಾರ್ಮಿಕರು ದೂರಿದ್ದಾರೆ.

ಆ ಕೂಡಲೇ ತರಕಾರಿ, ಪಾತ್ರೆಗಳು, ಸುಸಲಾ, ಉರುವಲು ಸೌದೆ ಚೆಲ್ಲಪಿಲ್ಲಿಯಾಗಿವೆ. ಈ ಮಧ್ಯೆ ಕೆಲ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಡುಗೆ ಸಿದ್ಧತೆಯಲ್ಲಿದ್ದ ಸಿಬ್ಬಂದಿ ಎಲ್ಲಾ ಅಲ್ಲೆ ಬಿಟ್ಟು ನಾವು ಅಡುಗೆ ಮಾಡುವುದಿಲ್ಲ ಎಂದು ಹಟ ಹಿಡಿದು ಬಾಗಿಲು ಹೊರಗಡೆ ಬಂದು ಕುಳಿತು ಕೊಂಡಿದ್ದಾರೆ.

ADVERTISEMENT

ವಿಷಯ ಗೊತ್ತಾಗುತ್ತಿದ್ದಂತೆ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಕಲಬುರ್ಗಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ, ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ ರಾಠೋಡ, ಶಹಾಬಾದ್ ಡಿವೈಎಸ್ಪಿ ವೆಂಕನಗೌಡ ಪಾಟೀಲ, ಚಿತ್ತಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ ಮೇಕಿನ್, ಜೆಸ್ಕಾಂ ಎಇಇ ವಿವೇಕಾನಂದ ಕುಲಕರ್ಣಿ, ಪಂಚಾಯತ್ ರಾಜ್ ಇಲಾಖೆ ಎಇಇ ವೀರೇಂದ್ರಕುಮಾರ, ಕಾಳಗಿ ಸಿಪಿಐ ಭೋಜರಾಜ ರಾಠೋಡ, ಮಾಡಬೂಳ ಪಿಎಸ್ಐ ವಿಜಯಕುಮಾರ ನಾಯಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಸ್ಥಳಕ್ಕೆ ದೌಡಾಯಿಸಿದರು.

ಪರಿಸ್ಥಿತಿ ಅವಲೋಕಿಸಿದ ಅವರು ಎಲ್ಲರನ್ನೂ ಸಮಾಧಾನಪಡಿಸಿ ಸಿಬ್ಬಂದಿಗೆ ಅಡುಗೆಯಲ್ಲಿ ನಿರತರಾಗುವಂತೆ ತಿಳಿಸಿದ್ದಾರೆ. ಆದರೆ ಪಟ್ಟು ಬಿಗಿ ಹಿಡಿದ ಸಿಬ್ಬಂದಿ, ‘ಯಾವುದೇ ಕಾರಣಕ್ಕೂ ನಾವು ಅಡುಗೆ ಮಾಡುವುದಿಲ್ಲ. ಈ ಜನರ ಮಧ್ಯೆ ಕರ್ತವ್ಯನಿರ್ವಹಿಸಲು ತಮಗಾಗಲ್ಲ, ನಮ್ಮನ್ನು ಇಲ್ಲಿಂದ ಬಿಡುಗಡೆಗೊಳಿಸಿ’ ಎಂದು ಹಠ ಹಿಡಿದರು.

ಕೊನೆಗೆ 50ರಿಂದ 100ಮಂದಿ ಮೇಲೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿ ಕ್ವಾರಂಟೈನ್ ಕೇಂದ್ರದಿಂದ ಅವರು ದೂರ ಉಳಿದುಕೊಂಡರು.

ಅಧಿಕಾರಿಗಳು ಹೆಬ್ಬಾಳ ಕ್ವಾರಂಟೈನ್ ಕೇಂದ್ರದಿಂದ ಅನ್ನ, ಸಾಂಬಾರ್‌ ತರಿಸಿ ಮಧ್ಯಾಹ್ನದ ಊಟ ಬಡಿಸಿದರು. ಮುಂದಿನ ಅಡುಗೆ ವ್ಯವಸ್ಥೆಗಾಗಿ ಕೋರವಾರ ಗ್ರಾಮದ ಬಾಣಸಿಗರನ್ನು ಕರೆಸಲಾಯಿತು.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೋರವಾರ ಗ್ರಾ.ಪಂ. ಪಿಡಿಒ ರಾಜಶ್ರೀ, ತೆಂಗಳಿ ಪಿಡಿಒ ವಿದ್ಯಾಶ್ರೀ ಸೊಂತ, ಗೋಟೂರ ಪಿಡಿಒ ರೇವಣಸಿದ್ದಪ್ಪ ಕಲಶೆಟ್ಟಿ, ಗ್ರಾ.ಪಂ. ಕಾರ್ಯದರ್ಶಿ ರಮೇಶ ಆರ್‌. ಕಟ್ಟಿಮನಿ ಸೇರಿದಂತೆ 16 ಜನ ಗ್ರಾ.ಪಂ. ಸಿಬ್ಬಂದಿ ಸೆಕ್ಟರಲ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ಲಿಖಿತ ದೂರು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.