ADVERTISEMENT

ತುಡುಗುಣಿಯಲ್ಲಿ ರಸ್ತೆ ಕುಸಿತ: ಸೂರಿಮನೆ ಸಂಪರ್ಕಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 8:31 IST
Last Updated 1 ಸೆಪ್ಟೆಂಬರ್ 2022, 8:31 IST
 ತುಡುಗುಣಿಯಿಂದ ಸೂರಿಮನೆ ಹೋಗುವ ರಸ್ತೆಯು ಮತ್ತೆ ಕುಸಿದಿದೆ.
ತುಡುಗುಣಿಯಿಂದ ಸೂರಿಮನೆ ಹೋಗುವ ರಸ್ತೆಯು ಮತ್ತೆ ಕುಸಿದಿದೆ.   

ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ತುಡುಗುಣಿಯಿಂದ ಸೂರಿಮನೆ ಹೋಗುವ ರಸ್ತೆಯು ಮತ್ತೆ ಕುಸಿದಿದೆ. ತುಡುಗುಣಿ ಸೇತುವೆ ಬಳಿ ಮಣ್ಣು ಕುಸಿದಿದ್ದು, ಸೂರಿಮನೆ ಊರಿನ ಸಂಪರ್ಕಕ್ಕೆ‌ ಅಡ್ಡಿ ಉಂಟಾಗಿದೆ.

ಈ ರಸ್ತೆ ಕುಸಿಯುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಒಂದು ಬಾರಿ ಗ್ರಾಮಸ್ಥರೇ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಕಳೆದ ಬಾರಿ ರಸ್ತೆ ಕುಸಿದಾಗ‌ ಕಾರ್ಮಿಕ ಸಚಿವರೂ ಆಗಿರುವ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಿವಂತೆ ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದ್ದರು.

‘ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಿ‌ ಪ್ರಸ್ತಾವ ಸಲ್ಲಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ₹ 90 ಲಕ್ಷ ಮಂಜೂರಾಗಿದೆ. ಇದನ್ನು ಯಾವ ರೀತಿ ಬಳಸಬೇಕು ಎನ್ನುವುದನ್ನು ಸಚಿವರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ಈಗ ತಾತ್ಕಾಲಿಕವಾಗಿ ದುರಸ್ತಿ‌ಗೊಳಿಸಲು ಸೂಚಿಸಲಾಗಿದೆ‌’ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಎ.ಇ.ಇ ಅಶೋಕ ಬಂಟ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉಮ್ಮಚಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಪೂಜಾರಿ, ಸದಸ್ಯರಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ, ಕುಪ್ಪಯ್ಯ ಪೂಜಾರಿ, ಪ್ರಮುಖ ರಾಮಚಂದ್ರ ಭಟ್ಟ ಸೂರಿಮನೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.