ADVERTISEMENT

ಸಿದ್ದಾಪುರ: ಜಲ ಮರುಪೂರಣಕ್ಕೆ ಸಂಘಟನೆ ಸಾರಥ್ಯ

ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರಿಂದ ಜಾಗೃತಿ

ರವೀಂದ್ರ ಭಟ್ಟ, ಬಳಗುಳಿ
Published 6 ಜೂನ್ 2020, 20:12 IST
Last Updated 6 ಜೂನ್ 2020, 20:12 IST
ತಮ್ಮ ಮನೆಯ ಜಲ ಮರುಪೂರಣ ವ್ಯವಸ್ಥೆಯೊಂದಿಗೆ ಸಿದ್ದಾಪುರ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್
ತಮ್ಮ ಮನೆಯ ಜಲ ಮರುಪೂರಣ ವ್ಯವಸ್ಥೆಯೊಂದಿಗೆ ಸಿದ್ದಾಪುರ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್   

ಸಿದ್ದಾಪುರ: ಸ್ಥಳೀಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕವು, ಜಲ ಮರುಪೂರಣದ ಕುರಿತು ಜಾಗೃತಿಯನ್ನು ಎರಡು ವರ್ಷ ಅಭಿಯಾನವನ್ನಾಗಿ ನಡೆಸಿದೆ. ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಎಷ್ಟೋ ವರ್ಷಗಳ ಹಿಂದೆಯೇ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿದ್ದಾರೆ.

ಒಂದು ಇಡೀ ವರ್ಷ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯ್ತಿಗೆ ತೆರಳಿದ ನಿವೃತ್ತ ನೌಕರರು, ಶೌಚಾಲಯ ನಿರ್ಮಾಣದ ಕುರಿತು ಜನರಿಗೆ ತಿಳಿವಳಿಕೆ ನೀಡಿದ್ದಾರೆ. ಅದರಂತೆ ಎರಡು ವರ್ಷಗಳ ಕಾಲ ತಾಲ್ಲೂಕಿನ ಎಲ್ಲ 23 ಗ್ರಾಮ ಪಂಚಾಯ್ತಿಗಳಿಗೂ ತೆರಳಿ, ಮಳೆ ನೀರನ್ನು ನೆಲದೊಳಗೆ ಇಂಗಿಸುವಿಕೆಯ ಅನಿವಾರ್ಯತೆಯನ್ನು ಸಾರಿ ಹೇಳಿದ್ದಾರೆ.

ಈ ಕಾರ್ಯ ಚಟುವಟಿಕೆಯ ಮುಂಚೂಣಿಯಲ್ಲಿರುವ ಸಿ.ಎಸ್.ಗೌಡರ್, ಸುಮಾರು 15–20 ವರ್ಷಗಳ ಹಿಂದೆಯೇ ಮಳೆ ನೀರು ಮರುಪೂರಣ ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿ ರೂಪಿಸಿದ್ದಾರೆ. ಸ್ಥಳೀಯ ತಾಲ್ಲೂಕು ಪಂಚಾಯ್ತಿಯಲ್ಲಿ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಅವರು ಅಭಿವೃದ್ಧಿ ಅಧಿಕಾರಿಯಾಗಿದ್ದರು. ಪಟ್ಟಣದ ಎ.ಪಿ.ಎಂ.ಸಿ ಸಮೀಪದ ಇಂದಿರಾ ನಗರದಲ್ಲಿರುವ ತಮ್ಮ ಮನೆಯ ಪ್ರತಿ ಚಾವಣಿಯ ನೀರು ಪೈಪ್‌ಗಳ ಮೂಲಕ ಕೆಳಗೆ ಬರುವಂತೆ ಮಾಡಿದ್ದಾರೆ. ಆ ನೀರನ್ನು ಬಾವಿಯ ಸುತ್ತಲಿನ ಗುಂಡಿಯಲ್ಲಿ ಹರಿಸಿ, ನೀರು ನೆಲದಲ್ಲಿ ಇಂಗುವಂತೆ ಮಾಡಿದ್ದಾರೆ. ಇದಕ್ಕೆ ಆ ಸಂದರ್ಭದಲ್ಲಿ ಸುಮಾರು₹ 10 ಸಾವಿರ ವೆಚ್ಚವಾಗಿದೆ.

ADVERTISEMENT

‘ನಾನು ಮಳೆ ನೀರು ಸಂಗ್ರಹದ ಮಹತ್ವ ಅರಿಯಲು ಪರಿಸರ ಬರಹಗಾರ ಶಿವಾನಂದ ಕಳವೆ ಕಾರಣ. ಅವರಿಂದ ಸ್ಫೂರ್ತಿ ಪಡೆದು ಈ ಕಾರ್ಯದಲ್ಲಿ ಮುಂದಾದೆ’ ಎಂಬುದು ಸಿ.ಎಸ್.ಗೌಡರ್ ಅವರ ಮಾತುಗಳು.

‘ನನ್ನ ಬಾವಿಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುತ್ತಿತ್ತು. ಚಾವಣಿ ನೀರನ್ನು ನೆಲದಲ್ಲಿ ಇಂಗಿಸಿದ ನಂತರ ಒಮ್ಮೆ ಕೂಡ ಬಾವಿಯಲ್ಲಿ ನೀರು ಕಡಿಮೆಯಾಗಿಲ್ಲ. ಒಂದೆರಡು ಮಳೆ ಬಿದ್ದರೂ ಬಾವಿಯಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗುತ್ತದೆ’ ಎಂದು ಅವರು ವಿವರಿಸಿದರು.

ಜಲ ಸಂವರ್ಧನೆಯಲ್ಲಿ ಭಾಗಿ:ನಿವೃತ್ತ ನೌಕರರ ಸಂಘದತಾಲ್ಲೂಕು ಘಟಕದ ಅಧ್ಯಕ್ಷರ ನೇತೃತ್ವದಲ್ಲಿ 40 ಸದಸ್ಯರು, ಶಿವಾನಂದ ಕಳವೆ ಅವರ ಕಾನ್ಮನೆಗೆ ಹೋಗಿದ್ದರು., ಅಲ್ಲಿ ಮಳೆ ನೀರು ಸಂಗ್ರಹ ಹಾಗೂ ಜಲ ಸಂವರ್ಧನೆ ಬಗ್ಗೆ ನಡೆದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

------------

ನಾವು ನಡೆಸಿದ ಜಲ ಮರುಪೂರಣ ಕಾರ್ಯಕ್ರಮಗಳಿಂದ ನಮ್ಮ ಸಂಘದ ಸದಸ್ಯರೂ ತಮ್ಮ ಮನೆಗಳಲ್ಲಿ ಮಳೆ ನೀರು ಮರುಪೂರಣ ವ್ಯವಸ್ಥೆ ರೂಪಿಸಿದ್ದಾರೆ.

- ಸಿ.ಎಸ್.ಗೌಡರ್, ಅಧ್ಯಕ್ಷ, ತಾಲ್ಲೂಕು ನಿವೃತ್ತ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.