ಶಿರಸಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮನೆಯಂಗಳಲ್ಲಿ ಇಂಗುಗುಂಡಿ ನಿರ್ಮಾಣಕ್ಕೆ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಿವೆ. ಇನ್ನು ಪ್ರತಿಯೊಬ್ಬರೂ ಮನೆಯಂಗಳಲ್ಲಿ ಮಳೆ ನೀರು ಇಂಗಿಸಿ, ಜಲಕ್ಷಾಮವನ್ನು ದೂರ ಮಾಡಬಹುದಾಗಿದೆ.
ಜಲ ಸಂರಕ್ಷಣೆ ಅಭಿಯಾನದಲ್ಲಿ ಸಕ್ರಿಯರಾಗಿರುವ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಅವರು, ಎರಡು ವರ್ಷಗಳ ಹಿಂದೆ ಈ ಪ್ರಯತ್ನಕ್ಕೆ ಕೈಹಾಕಿದ್ದರು. ತಾಲ್ಲೂಕಿನ 32 ಗ್ರಾಮ ಪಂಚಾಯ್ತಿಗಳಲ್ಲಿ ಈ ಯೋಜನೆ ಅನುಷ್ಠಾನವೂ ಪ್ರಾರಂಭವಾಗಿತ್ತು. 100ಕ್ಕೂ ಹೆಚ್ಚು ಕಡೆಗಳಲ್ಲಿ ಇಂಗುಗುಂಡಿ ನಿರ್ಮಾಣ ಕಾರ್ಯವೂ ಆರಂಭವಾಗಿತ್ತು. ಆದರೆ, ನರೇಗಾ ಯೋಜನೆಯಲ್ಲಿ ಇದರ ಅನುಷ್ಠಾನಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿ, ಕಾಮಗಾರಿಗೆ ಹಿನ್ನಡೆಯಾಗಿತ್ತು.
‘ಪ್ರಸ್ತುತ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲೂ ನರೇಗಾ ಯೋಜನೆಯಡಿ ಗ್ರಾಮೀಣ ಜನರು ಇಂಗುಗುಂಡಿ ನಿರ್ಮಿಸಿಕೊಳ್ಳಬಹುದು’ ಎಂದು ಚಂದ್ರು ದೇವಾಡಿಗ ತಿಳಿಸಿದ್ದಾರೆ. ಇದರ ಪ್ರಥಮ ಪ್ರಯೋಗದ ಉದ್ಘಾಟನೆ, ತಾಲ್ಲೂಕಿನ ಬಿಸಲಕೊಪ್ಪದ ಸುಭಾಸ ನಗರದಲ್ಲಿ ನಡೆಯಲಿದೆ. ಇಲ್ಲಿ ಇಂಗುಗುಂಡಿ ರಚಿಸಿರುವ 30 ಮನೆಗಳಿಗೆ ನರೇಗಾ ಯೋಜನೆಯಡಿ ಕೂಲಿ ವೆಚ್ಚ ದೊರೆತಿದೆ. ಜೂನ್ 3ರ ಮಧ್ಯಾಹ್ನ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಈ ಕಾರ್ಯಕ್ರಮ ಉದ್ಘಾಟಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.