ADVERTISEMENT

ಶಿರಸಿ| ರಾಮಕೃಷ್ಣ ಹೆಗಡೆ ನಾಯಕತ್ವ ಇಂದಿಗೂ ಆದರ್ಶ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:18 IST
Last Updated 13 ಜನವರಿ 2026, 5:18 IST
ಶಿರಸಿಯ ಯಲ್ಲಾಪುರ ನಾಕಾದಲ್ಲಿ ರಾಮಕೃಷ್ಣ ಹೆಗಡೆ ಅವರ ಪ್ರತಿಮೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಲಾರ್ಪಣೆ ಮಾಡಿದರು
ಶಿರಸಿಯ ಯಲ್ಲಾಪುರ ನಾಕಾದಲ್ಲಿ ರಾಮಕೃಷ್ಣ ಹೆಗಡೆ ಅವರ ಪ್ರತಿಮೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಲಾರ್ಪಣೆ ಮಾಡಿದರು   

ಶಿರಸಿ: ‘ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಮೂಲಕ ಸಾಮಾನ್ಯ ಜನರ ಬದುಕಿಗೆ ಸರ್ಕಾರ ಹೇಗೆ ಆಧಾರವಾಗಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಅಪರೂಪದ ಮುತ್ಸದ್ದಿ. ರಾಜಕಾರಣದ ಮೌಲ್ಯಗಳನ್ನು ಎತ್ತಿ ಹಿಡಿದ ಅವರ ನಾಯಕತ್ವ ಇಂದಿಗೂ ಆದರ್ಶಪ್ರಾಯ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 

​ಸೋಮವಾರ ನಗರದ ಯಲ್ಲಾಪುರ ನಾಕಾದಲ್ಲಿ ಆಯೋಜಿಸಲಾಗಿದ್ದ ರಾಮಕೃಷ್ಣ ಹೆಗಡೆ ಅವರ 22ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಇಂದಿನ ರಾಜಕಾರಣದಲ್ಲಿ ಮೌಲ್ಯಗಳು ಕ್ಷೀಣಿಸುತ್ತಿರುವಾಗ, ಹೆಗಡೆಯವರ ಜೀವನ ನಮಗೆ ದಾರಿದೀಪವಾಗಿದೆ. ಅವರು ನೈತಿಕತೆಯ ಆಧಾರದ ಮೇಲೆ ರಾಜಕೀಯ ಮಾಡಿದವರು. ಏಷ್ಟೇ ಸವಾಲುಗಳು ಎದುರಾದರೂ ತಮ್ಮ ತತ್ವ ಸಿದ್ಧಾಂತಗಳಿಂದ ಎಂದೂ ಹಿಂದೆ ಸರಿಯಲಿಲ್ಲ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು’ ಎಂದರು. 

ADVERTISEMENT

ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ‘ಯಲ್ಲಾಪುರ ನಾಕಾದಿಂದ ರಾಘವೇಂದ್ರ ವೃತ್ತದವರೆಗಿನ ರಸ್ತೆಗೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಬೇಕು ಹಾಗೂ ಸರ್ಕಾರವು ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

​ಪ್ರಮುಖರಾದ ನಂದನ ಹೆಗಡೆ, ಸದಾನಂದ ಭಟ್, ಗುರುಪ್ರಸಾದ ಹೆಗಡೆ, ಅನಂತಮೂರ್ತಿ ಹೆಗಡೆ, ಕೆ.ಆರ್.ಹೆಗಡೆ, ಆರ್.ವಿ.ಹೆಗಡೆ, ರಾಘವೇಂದ್ರ ಶೆಟ್ಟಿ, ಪ್ರೇಮಕುಮಾರ ನಾಯ್ಕ, ನಾಗರಾಜ ನಾಯ್ಕ ಇದ್ದರು.