ಸಿದ್ಧಾಪುರ: ‘ಸಮಾಜದಲ್ಲಿ ಎರಡು ರೀತಿಯ ವ್ಯಕ್ತಿಗಳಿದ್ದಾರೆ. ಒಬ್ಬರು ನಿಧನರಾಗಿದ್ದರೂ ಜೀವಂತರಾಗಿರುವವವರು, ಮತ್ತೊಬ್ಬರು ಜೀವಂತವಾಗಿದ್ದರೂ ಜೀವ ಇಲ್ಲದಂತಿರುವವರು. ರಾಮಕೃಷ್ಣ ಹೆಗಡೆ ನಿಧರಾಗಿದ್ದರೂ ಜನಪರ ಕಾರ್ಯಗಳಿಂದ ಇಂದಿಗೂ ಜೀವಂತವಾಗಿದ್ದಾರೆ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದ ಶಿಕ್ಷಣ ಪ್ರಸಾರರಕ ಸಮಿತಿ ಆವರಣದಲ್ಲಿ ಶುಕ್ರವಾರ ನಡೆದ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಮತ್ತು ಚೇತನಾ ಕ್ರೆಡಿಟ್ ಕೋಆಪರೇಟಿವ್ ಸೌಹಾರ್ದ ಸೊಸೈಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದವರು ಹೆಗಡೆಯವರು. ಮುಖ್ಯಂತ್ರಿಯಾದವರು ಜನಸಾಮಾನ್ಯರೊಂದಿಗೆ ಹೇಗೆ ಸಂಬಂಧ ಹೊಂದಿರಬೇಕು ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದ್ದರು. 45 ವರ್ಷದ ನನ್ನ ರಾಜಕಾರಣದಲ್ಲಿ ಅವರಂತಹ ಮುತ್ಸದ್ಧಿ ರಾಜಕಾರಣಿಯನ್ನು ನೋಡಿಲ್ಲ. ಅವರು ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ. ಈಗ ಮೌಲ್ಯ ಇಲ್ಲದೆ, ಕೇವಲ ರಾಜಕಾರಣ ಮಾತ್ರ ಉಳಿದುಕೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ‘ರಾಷ್ಟ್ರ ಕಂಡ ಸಜ್ಜನ, ನಿಷ್ಠಾವಂತ ರಾಜಕಾರಣಿ ರಾಮಕೃಷ್ಣ ಹೆಗಡೆ. ರಾಜಕಾರಣ ಇಂದು ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ. ಮತದಾರರೂ ತಮ್ಮ ಮತಗಳ ಮಹತ್ವ ತಿಳಿದುಕೊಳ್ಳುತ್ತಿಲ್ಲ. ನಾವು ಪ್ರಜಾಪ್ರಭುತ್ವ ಎನ್ನುತ್ತೇವೆ. ಆದರೆ ನಿಜವಾದ ಪ್ರಜಾಭುತ್ವ ಇದೆಯೇ ಎಂಬ ಅನುಮಾನ ಕಾಡುತ್ತಿದೆ. ಕೇವಲ ಆರೋಪ ಮಾತ್ರಕ್ಕೆ ರಾಜೀನಾಮೆ ನೀಡಿದ ವ್ಯಕ್ತಿತ್ವ ಹೆಗಡೆ ಅವರದ್ದಾಗಿತ್ತು’ ಎಂದು ಹೇಳಿದರು.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಮಾತಮಾಡಿ, ‘ನಾವು ರಾಜಕಾರಣದಲ್ಲಿ ಹೆಗಡೆಯವರ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಇದೆ. ಬಹಳ ಜನರು ನಾಯಕರಾಗುತ್ತಾರೆ. ಆದರೆ ಯಾರು ಹೆಚ್ಚು ನಾಯಕರನ್ನು ಸಮಾಜಕ್ಕೆ ನೀಡುತ್ತಾರೋ ಅವರೇ ನಿಜವಾದ ನಾಯಕರಾಗುತ್ತಾರೆ. ಹೆಗಡೆಯವರ ಆದರ್ಶ ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸವಾಗುತ್ತಿರುವುದು ಶ್ಲಾಘನೀಯ’ ಎಂದರು.
ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಶಶಿಭೂಷಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಮಕೃಷ್ಣ ಹೆಗಡೆ ಅನುಯಾಯಿಗಳಾದ ಪಿ.ಎಸ್. ಭಟ್ಟ ಉಪ್ಪೋಣಿ, ಜಿ.ಎಂ. ಹೆಗಡೆ ಮುಳಖಂಡ, ಗೋಪಾಲಕೃಷ್ಣ ಹೆಗಡೆ ಮುರೇಗಾರ, ಸಿ.ಕೆ. ಅಶೋಕ ಮೈನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಪ್ರಮೋದ ಹೆಗಡೆ ಯಲ್ಲಾಪುರ, ಕೆ.ಜಿ. ನಾಯ್ಕ ಹಣಜಿಬೈಲ್, ಗೋಪಾಲಕೃಷ್ಣ ವೈದ್ಯ, ಜಿ.ಟಿ. ಹೆಗಡೆ ತಟ್ಟಿಸರ, ಆರ್.ಎಂ. ಹೆಗಡೆ ಬಾಳೇಸರ, ವಿ.ಎನ್. ಭಟ್ಟ ಅಳ್ಳಂಕಿ, ಶ್ರೀಪಾದ ರಾಯದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.