ADVERTISEMENT

ಭಟ್ಕಳಕ್ಕೆ ಮೆರಗು ಕೊಡುವ ರಂಜಾನ್ ಮಾರುಕಟ್ಟೆ

ಹಿಂದೂ ಧರ್ಮೀಯರಿಂದಲೂ ಸಾಮಗ್ರಿಗಳ ಖರೀದಿ:ನೀತಿ ಸಂಹಿತೆಯಿಂದ ಅವಧಿ ಮೊಟಕು

ಮೋಹನ ನಾಯ್ಕ
Published 7 ಏಪ್ರಿಲ್ 2024, 6:01 IST
Last Updated 7 ಏಪ್ರಿಲ್ 2024, 6:01 IST
ಭಟ್ಕಳದಲ್ಲಿನ ರಂಜಾನ್ ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದರು
ಭಟ್ಕಳದಲ್ಲಿನ ರಂಜಾನ್ ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದರು   

ಭಟ್ಕಳ: ಮುಸ್ಲಿಂ ಧರ್ಮೀಯರ ಪಾಲಿಗೆ ಪವಿತ್ರ ಮಾಸವಾಗಿರುವ ರಂಜಾನ್ ಕೊನೆಗೊಳ್ಳುವ ಹಂತದಲ್ಲಿ ಪಟ್ಟಣದಲ್ಲಿ ತೆರೆಯುವ ‘ರಂಜಾನ್ ಮಾರುಕಟ್ಟೆ’ ಹೊಸದೇ ಲೋಕವನ್ನು ಸೃಷ್ಟಿಸಿದಂತೆ ಭಾಸವಾಗುತ್ತದೆ. ಇದು ಪಟ್ಟಣಕ್ಕೆ ಹೊಸ ಮೆರಗು ನೀಡುತ್ತದೆ.

ಬಗೆಬಗೆಯ ಬಟ್ಟೆಗಳು, ಬಾಯಲ್ಲಿ ನೀರೂರಿಸುವ ತಿನಿಸುಗಳು, ಝಗಮಗಿಸುವ ವಿದ್ಯುದ್ದೀಪಗಳು, ತರಹೇವಾರಿ ಸಾಮಗ್ರಿಗಳು ಜನರನ್ನು ಮನಸೆಳೆಯುತ್ತವೆ. ಈ ಮಾರುಕಟ್ಟೆಯಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು ಸಾಮಗ್ರಿಗಳ ಖರೀದಿಯಲ್ಲಿ ತೊಡಗುವುದು ಇನ್ನೊಂದು ವಿಶೇಷ.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾಕಲಾಗುವ ರಂಜಾನ್ ಮಾರುಕಟ್ಟೆ ತನ್ನದೇ ವಿಶಿಷ್ಟತೆ ಹೊಂದಿದ್ದು, ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಜನರು ಈ ಮಾರುಕಟ್ಟೆಗೆ ಬಂದು ಖರೀದಿ ಮಾಡಿ ಹೋಗುತ್ತಾರೆ.

ADVERTISEMENT

ರಂಜಾನ್ ಉಪವಾಸದ 15 ದಿನಗಳ ನಂತರ ಭಟ್ಕಳದ ಮುಖ್ಯ ರಸ್ತೆಯಲ್ಲಿ ರಂಜಾನ್ ಮಳಿಗೆಯನ್ನು ಹಾಕಲು ಪುರಸಭೆಯಿಂದ ಜಾಗ ಗುರುತಿಸಿ ಅನುಮತಿ ನೀಡಲಾಗುತ್ತದೆ. ಪುರಸಭೆಯಿಂದ ಮಳಿಗೆಯನ್ನು ಪಡೆದ ವ್ಯಾಪಾರಸ್ಥರು ಬಟ್ಟೆ, ಆಟಿಕೆ ಸಾಮಾನು, ದಿನನಿತ್ಯ ಬಳಸುವ ವಸ್ತುಗಳನ್ನು ಅತೀ ಕಡಿಮೆ ದರದಲ್ಲಿ ಮಾರಾಟಕ್ಕೆ ಇಡುತ್ತಾರೆ. ಕಡಿಮೆ ಬೆಲೆಗೆ ಸಿಗುವ ಈ ವಸ್ತುಗಳನ್ನು ಖರೀದಿ ಮಾಡಲು ಜನರು ಮುಗಿಬೀಳುವುದು ಸಾಮಾನ್ಯವಾಗಿದೆ.

‘ಮುಸ್ಲಿಮರ ರಂಜಾನ್ ಹಬ್ಬದ ಅಂಗವಾಗಿ ಹಾಕಲಾಗುವ ಈ ಮಾರುಕಟ್ಟೆಗೆ ಹಿಂದೂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಖರೀದಿ ಮಾಡುತ್ತಾರೆ. ಭಟ್ಕಳ ಮಾತ್ರವಲ್ಲದೇ ಹೊನ್ನಾವರ, ಕುಮಟಾ ತಾಲ್ಲೂಕಿನ ಜನರು, ನೆರೆಯ ಉಡುಪಿ ಜಿಲ್ಲೆಯ ಶಿರೂರು, ಬೈಂದೂರು ಭಾಗದ ಜನರು ಬಂದು ಖರೀದಿ ಮಾಡಿ ಹೋಗುತ್ತಾರೆ. ಹಬ್ಬದ ಮುಂಚಿನ ಮೂರು ನಾಲ್ಕು ದಿನಗಳಲ್ಲಿ ಇಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಈ ಸಮಯದಲ್ಲಿ ದಿನದ ಹಗಲು ರಾತ್ರಿ ಕೂಡ ಮಾರುಕಟ್ಟೆ ಸಂಪೂರ್ಣ ತೆರದಿರುತ್ತದೆ’ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

‘ಪ್ರತಿ ವರ್ಷ ರಂಜಾನ್ ಮಾರುಕಟ್ಟೆಗೆ ನಾವು ಗೋವಾದಿಂದ ಬಂದು ಬಟ್ಟೆ ವ್ಯಾಪಾರ ಮಾಡಿ ಹೋಗುತ್ತೇವೆ. ಕೋವಿಡ್ ನಂತರ ಕಾಲದಿಂದ ಪೂರ್ಣ ಪ್ರಮಾಣದ ರಂಜಾನ್ ಮಾರುಕಟ್ಟೆ ಭಟ್ಕಳದಲ್ಲಿ ನಡೆದಿಲ್ಲ. ಕಳೆದ ವರ್ಷ ಹಾಗೂ ಈ ವರ್ಷ ಚುನಾವಣೆ ನೀತಿ ಸಂಹಿತೆ ಬಂದ ಕಾರಣ ಮಾರುಕಟ್ಟೆ ಅವಕಾಶ ಸಿಗಲಿಲ್ಲ. ಈಗ ಒಂದು ವಾರದ ರಂಜಾನ್ ಮಾರುಕಟ್ಟೆಗೆ ಅವಕಾಶ ನೀಡಲಾಗಿದ್ದು, ನಿರೀಕ್ಷಿತ ವ್ಯಾಪಾರ ನಡೆಯುವ ನಂಬಿಕೆ ಇಲ್ಲ’ ಎನ್ನುತ್ತಾರೆ ಗೋವಾದ ಬಟ್ಟೆ ವ್ಯಾಪಾರಿ ಸೈಯದ್ ಇಮ್ರಾನ್.

ರಂಜಾನ್ ಮಾರುಕಟ್ಟೆಯಲ್ಲಿ ಜನರು ವ್ಯಾಪಾರದಲ್ಲಿ ತೊಡಗಿರುವುದು

ಚುನಾವಣೆ ನೀತಿ ಸಂಹಿತೆ: 15 ದಿನದ ಬದಲು ಒಂದು ವಾರಕ್ಕಷ್ಟೆ ಅನುಮತಿ ಉಡುಪಿ ಜಿಲ್ಲೆಯಿಂದಲೂ ಖರೀದಿಗೆ ಬರುವ ಗ್ರಾಹಕರು ಭಾವೈಕ್ಯ ಸಾರುವ ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.