ADVERTISEMENT

ಜಾತ್ರೆಪೇಟೆಯಲ್ಲಿ ಕ್ಷಿಪ್ರ ಕಾರ್ಯಪಡೆಯ ಗಸ್ತು

ಕಮಾಂಡೋ ಮಾದರಿಯ ಪ್ರತ್ಯೇಕ ಸಮವಸ್ತ್ರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 15:18 IST
Last Updated 11 ಮಾರ್ಚ್ 2022, 15:18 IST
ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಗಸ್ತು ತಿರುಗಲು ರಚಿಸಿದ ಕ್ಷಿಪ್ರಕಾರ್ಯ‍ಪಡೆಯ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್.
ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಗಸ್ತು ತಿರುಗಲು ರಚಿಸಿದ ಕ್ಷಿಪ್ರಕಾರ್ಯ‍ಪಡೆಯ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್.   

ಶಿರಸಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಪೊಲೀಸ್ ಇಲಾಖೆ ವಿಶೇಷ ಕ್ರಮ ಕೈಗೊಂಡಿದೆ.

ಜನಸಂದಣಿ ಇರುವ ಬಳೆಪೇಟೆ, ಜಾತ್ರಾ ಪೇಟೆ, ದೇವಿಯ ಗದ್ದುಗೆ ಅಕ್ಕಪಕ್ಕ ಗಸ್ತು ತಿರುಗಲು ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಮಿಲಿಟರಿ ಶೈಲಿಯ ಪ್ಯಾಂಟು, ಕಪ್ಪು ಟೀಶರ್ಟ್, ದಪ್ಪನೆಯ ಕಪ್ಪು ಬೂಟು ಒಳಗೊಂಡ ಕಮಾಂಡೋ ಮಾದರಿಯ ಸಮವಸ್ತ್ರದಲ್ಲಿ ಪಡೆಯ ಸದಸ್ಯರು ನಿಗಾ ಇಡಲಿದ್ದಾರೆ.

ಯುವತಿಯರು, ಮಹಿಳೆಯರು ಹೆಚ್ಚು ತಿರುಗಾಡುವ ಬಳೆಪೇಟೆಯಲ್ಲಿ ಕಿರುಕುಳ ನೀಡುವ, ಸರಗಳ್ಳತನ ಮಾಡಲು ಯತ್ನಿಸುವವರ ಓಡಾಟವೂ ಇರುತ್ತದೆ. ಅಂತಹವುಗಳನ್ನು ನಿಯಂತ್ರಿಸಲು ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ ಎನ್ನುತ್ತಾರೆ ಶಿರಸಿ ಪೊಲೀಸರು.

ADVERTISEMENT

45 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ ಶಿರಸಿ, ಸಿದ್ದಾಪುರ, ಮುಂಡಗೋಡ ಮತ್ತು ಯಲ್ಲಾಪುರ ಪೊಲೀಸ್ ಠಾಣೆಗಳ ಕಾನ್‍ಸ್ಟೆಬಲ್‍ಗಳಿದ್ದಾರೆ. 20 ಮಹಿಳಾ ಸಿಬ್ಬಂದಿಯೂ ಇದ್ದಾರೆ.

700ಕ್ಕೂ ಹೆಚ್ಚು ಸಿಬ್ಬಂದಿ:

‘ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 700ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗುವುದು. 2 ಕೆ.ಎಸ್.ಆರ್.ಪಿ., 4 ಡಿಎಆರ್ ತುಕಡಿ ನಿಯೋಜನೆ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ತಿಳಿಸಿದರು.

‘8 ರಿಂದ 9 ಲಕ್ಷ ಭಕ್ತರ ಆಗಮನದ ನಿರೀಕ್ಷೆ ಇದೆ. ಜನ ದಟ್ಟಣೆ, ವಾಹನ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತದೆ. ನೂರಕ್ಕೂ ಹೆಚ್ಚು ಕಡೆ ಸಿಸಿಟಿವಿ ಅಳವಡಿಕೆಯಾಗಿದೆ. ಅಪರಾಧ ನಿಯಂತ್ರಣಕ್ಕೆ ಅಕ್ಕಪಕ್ಕ ಜಿಲ್ಲೆಯ ಸಿಬ್ಬಂದಿ ನೇಮಿಸಿಕೊಂಡು ವಿಶೇಷ ತಂಡ ರಚಿಸಲಾಗಿದೆ. ಸರಗಳ್ಳತನ, ಪಿಕ್ ಪಾಕೆಟ್ ಮಾಡುವವರ ಬಗ್ಗೆ ನಿಗಾ ಇಡಲಾಗುವುದು’ ಎಂದರು.

‘ಭಕ್ತರ ಸಂಖ್ಯೆ ವಾರಾಂತ್ಯದಲ್ಲಿ ಹೆಚ್ಚು ಇರುವ ನಿರೀಕ್ಷೆ ಇರುವ ಕಾರಣ ಆ ಸಂದರ್ಭದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುತ್ತೇವೆ. ಮೂರು ಪಾಳಿಗಳಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.

ಪೌರಾಯುಕ್ತ ಕೇಶವ ಚೌಗುಲೆ, ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ತಹಶೀಲ್ದಾರ್‌ ಎಂ.ಆರ್.ಕುಲಕರ್ಣಿ, ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೀಶ ಜೋಗಳೇಕರ, ಸದಸ್ಯ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ ಇದ್ದರು.

ವೆಬ್‍ಸೈಟ್ ಲೋಕಾರ್ಪಣೆ:

ಶಿರಸಿ ಜಾತ್ರೆಗೆ ಬರುವ ಭಕ್ತರಿಗೆ ಮಾಹಿತಿಗಳನ್ನು ನೀಡುವ ಸಂಬಂಧ ಶಿರಸಿ ಪೊಲೀಸ್ ವಿಭಾಗ ಸಿದ್ಧಪಡಿಸಿರುವ www.sirsipolice.in ವೆಬ್‍ಸೈಟ್‍ನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಲೋಕಾರ್ಪಣೆಗೊಳಿಸಿದರು. ವೆಬ್‍ಸೈಟ್‍ ಮೂಲಕ ಜನರು ವಾಹನ ನಿಲುಗಡೆ ತಾಣ, ಸಂಚಾರಿ ಮಾರ್ಗ, ಜಾತ್ರೆಪೇಟೆಯ ವಿವರ, ಸಹಾಯವಾಣಿ ಸಂಖ್ಯೆಗಳ ಮಾಹಿತಿ ಪಡೆಯಬಹುದಾಗಿದೆ.

ನಗರದ ಹೊರವಲಯದಲ್ಲಿ ಸ್ಥಾಪಿಸಲಾಗುವ ತಪಾಸಣಾ ನಾಕೆಯಲ್ಲಿ ಹೊರಗಿನಿಂದ ಬರುವ ಭಕ್ತರಿಗೆ ಸಮಗ್ರ ಮಾಹಿತಿಯುಳ್ಳ ಕೈಪಿಡಿಯನ್ನು ಹಂಚಿಕೆ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.