
ಶಿರಸಿ: ‘ಅರಣ್ಯ ಕಾನೂನಿಗೆ ಸಂಬಂಧಪಟ್ಟಂತೆ ಅರಣ್ಯ ಸಚಿವರು ದಿನಕ್ಕೊಂದು ಹೇಳಿಕೆ ಮತ್ತು ಟಿಪ್ಪಣೆ ನೀಡುತ್ತಿದ್ದು, ಅರಣ್ಯ ಕಾನೂನಿಗೆ ಮತ್ತು ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ. ಇದು ಅರಣ್ಯ ಸಚಿವರಿಗೆ ಅರಣ್ಯ ಕಾನೂನುಗಳ ಮಾಹಿತಿ ಕೊರತೆಗೆ ಸಾಕ್ಷಿಯಾಗಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ನಗರದಲ್ಲಿ ಶುಕ್ರವಾರ, ಕರ್ನಾಟಕ ಅರಣ್ಯ ನಿಯಮದ ಅಡಿ ಜಾನುವಾರು ಮೇಯಿಸುವಿಕೆಗೆ ರಾಜ್ಯಪಾಲರ ಆದೇಶ ಅನುಸಾರ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯೊಂದಿಗೆ ರಾಜ್ಯ ಸರ್ಕಾರವು 1991 ಜುಲೈ 20ರಂದು ಹೊರ ರಾಜ್ಯದ ಪ್ರಾಣಿಗಳನ್ನು ರಾಜ್ಯದಲ್ಲಿ ಮೇಯಿಸಲು ಅವಕಾಶ ನೀಡಿದ ಆದೇಶವನ್ನು ಪ್ರದರ್ಶಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರವು ರಾಜ್ಯದ ಅರಣ್ಯಗಳಲ್ಲಿ ಜಾನುವಾರು ಮೇಯಿಸುವಿಕೆಯನ್ನು ಕ್ರಮಬದ್ಧಗೊಳಿಸಿ ಮೀಸಲು ಮತ್ತು ಸಂರಕ್ಷಿತ ಅರಣ್ಯದಲ್ಲಿ ಮೇಯಿಸಲು ಪರಿಷ್ಕೃತ ದರಗಳನ್ನು ನಿಗದಿಗೊಳಿಸಿ, ಮೇಯಿಸುವಿಕೆಗೆ ಅವಕಾಶ ನೀಡಿದೆ. ಆದರೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಚಿವರು ನೀಡಿದ ಹೇಳಿಕೆ ಗೊಂದಲ ಮೂಡಿಸಿದೆ. ಸಚಿವರ ಹೇಳಿಕೆಯು ಕಾನೂನು ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ’ ಎಂದರು.
‘ಇತರ ರಾಜ್ಯಗಳ ಪ್ರಾಣಿಗಳನ್ನು ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಮೇಯಿಸುವಿಕೆಗೆ ನಿರ್ದಿಷ್ಟ ದರ ನಿಗದಿಗೊಳಿಸಿದೆ. ಹೊರ ರಾಜ್ಯದ ಪ್ರತಿ ಆನೆಗೆ ಪ್ರತಿ ದಿನಕ್ಕೆ ₹100, ಒಂಟೆಗೆ ದಿನಕ್ಕೆ ₹50, ಎಮ್ಮೆಗೆ ವರ್ಷಕ್ಕೆ ₹25, ಹಸು, ಕರು, ಕತ್ತೆ, ಹೋರಿ ಮುಂತಾದ ಪ್ರಾಣಿಗಳಿಗೆ ಪ್ರತಿ ವರ್ಷ ಪ್ರತಿ ಪ್ರಾಣಿಗೆ ₹15 ಹಾಗೂ ಟಗರು, ಕುರಿಗಳಿಗೆ ವರ್ಷಕ್ಕೆ ತಲಾ ₹10 ಎಂದು ನಿಗದಿಗೊಳಿಸಲಾಗಿದೆ’ ಎಂದು ತಿಳಿಸಿದರು.
‘ಈ ಪರವಾನಗಿ ಮೇರೆಗೆ ಇತರ ರಾಜ್ಯಗಳ ಪ್ರಾಣಿಗಳನ್ನು ಕರ್ನಾಟಕ ರಾಜ್ಯದಲ್ಲಿ ಮೇಯಿಸುವಿಕೆಗೆ ಮುಕ್ತಗೊಳಿಸಿ ರಾಜ್ಯ ಸರ್ಕಾರ 34 ವರ್ಷಗಳ ಹಿಂದೆಯೇ ಆದೇಶ ಮಾಡಿರುವುದು ಗಮನಾರ್ಹ ಅಂಶ’ ಎಂದು ಹೇಳಿದರು.
ಯಲ್ಲಾಪುರ: ಕಾಡಿನಲ್ಲಿ ಜಾನುವಾರು ಮೇಯಿಸಲು ನಿಷೇಧ ವಿಧಿಸುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಉತ್ತರ ಕನ್ನಡ ಜಿಲ್ಲಾ ಭಾರತೀಯ ಕಿಸಾನ್ ಸಂಘ ವಿರೋಧಿಸಿದೆ. ಸಂಘ ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ್ದು ಇಂತಹ ವಿಚಿತ್ರ ಕಾನೂನನ್ನು ಮಾಡಲು ಹೊರಟಿರುವ ಸರ್ಕಾರಕ್ಕೆ ರೈತರ ಬದುಕು ಅರಣ್ಯ ಮತ್ತು ರೈತರ ಪರಸ್ಪರ ಸಂಬಂಧಗಳ ಬಗ್ಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದೆ.
ಗೋಮಾಳ ಸೊಪ್ಪಿನಬೆಟ್ಟದ ವ್ಯಾಪ್ತಿ ಕಡಿಮೆಯಾಗುತ್ತಿದೆ. ಈಗ ದನ ಕರುಗಳನ್ನು ಮೇಯಲು ಕಾಡಿಗೆ ಬಿಡಬಾರದೆಂಬ ಕಾನೂನು ರೂಪಿಸಲು ಹೊರಟಿರುವುದು ಅತ್ಯಂತ ಅಪಾಯಕಾರಿ. ಕಾಡುಪ್ರಾಣಿಗಳು ರೈತರ ಹೊಲಗದ್ದೆಗಳಿಗೆ ನುಗ್ಗಿ ಹಾನಿ ಮಾಡುವುದನ್ನು ನಿಯಂತ್ರಿಸಲು ಮಾರ್ಗೋಪಾಯ ರೂಪಿಸಿ ರೈತರ ಕಷ್ಟವೇನು ಎಂಬುದನ್ನು ಅರಣ್ಯ ಸಚಿವರು ತಿಳಿಯಲಿ. ಹಾನಿಗೆ ಸೂಕ್ತ ಪರಿಹಾರ ನೀಡಲಿ ಎಂದು ಸಂಘವು ಆಗ್ರಹಿಸಿದೆ. ಕಾಡಿನಲ್ಲಿ ದನ ಮೇಯಿಸುವುದನ್ನು ಮುಂದುವರೆಸಲು ಅವಕಾಶ ಕಲ್ಪಿಸಿ ರೈತರಿಗೆ ನೆರವಾಗಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವರಾಮ ಗಾಂವ್ಕರ ಕನಕನಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಜಂಟಿ ಹೇಳಿಕೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.