ADVERTISEMENT

ಭಾರಿ ಮಳೆ ಮುನ್ಸೂಚನೆ: ಉತ್ತರ ಕನ್ನಡ ಜಿಲ್ಲೆಯಲ್ಲಿ 3 ದಿನ ರೆಡ್ ಅಲರ್ಟ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:45 IST
Last Updated 10 ಜೂನ್ 2025, 14:45 IST
   

ಕಾರವಾರ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಪುನಃ ಆರಂಭಗೊಳ್ಳಲಿದ್ದು, ಜೂನ್ 12ರಿಂದ 14ರವರೆಗೆ ಭಾರಿ ಮಳೆ ಸುರಿಯಲಿರುವ ಕಾರಣ ಹವಾಮಾನ ಇಲಾಖೆ ರೆಡ್ ಅಲರ್ಟ್ ಮುನ್ಸೂಚನೆ ನೀಡಿದೆ.

‘ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳವರೆಗೆ ಗುಡುಗು ಸಿಡಿಲಿನೊಂದಿಗೆ ಕೆಲವು ಪ್ರದೇಶಗಳಲ್ಲಿ ಗಾಳಿಯಿಂದ ಕೂಡಿದ ರಭಸದ ಮಳೆ ಬೀಳುವ ಸಾಧ್ಯತೆ ಇದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಎಚ್ಚರಿಸಿದ್ದಾರೆ.

‘ಮೂರು ದಿನಗಳ ಕಾಲ ಮೀನುಗಾರರು ಕಡಲತೀರದಲ್ಲಿ ಮೀನುಗಾರಿಕೆ ನಡೆಸಬಾರದು. ಸಾಂಪ್ರದಾಯಿಕ ದೋಣಿಗಳು ನೀರಿಗೆ ಇಳಿಯಬಾರದು. ಮೀನುಗಾರಿಕೆ ಪರಿಕರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಕಡಲತೀರದಲ್ಲಿರುವವರು, ನದಿ ತೀರ, ತಗ್ಗು ಪ್ರದೇಶಗಳಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ಸಾಗಬೇಕು’ ಎಂದೂ ಸೂಚಿಸಿದ್ದಾರೆ.

ADVERTISEMENT

‘ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ತೊಂದರೆಗಳು ಎದುರಾದಲ್ಲಿ 08382 229857, 9483511015 ಸಂಖ್ಯೆಗೆ ಮಾಹಿತಿ ನೀಡಬಹುದು’ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.