ADVERTISEMENT

‘ದೇವತಾ ಉಪಾಸನೆಯೂ ಮುಖ್ಯ’

ಸ್ವರ್ಣವಲ್ಲಿಯಲ್ಲಿ ದೇವತಾ ದೇವತಾ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 14:31 IST
Last Updated 3 ಏಪ್ರಿಲ್ 2020, 14:31 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಕೆಲವೇ ವೈದಿಕರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯ ಆರಂಭವಾಗಿದೆ
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಕೆಲವೇ ವೈದಿಕರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯ ಆರಂಭವಾಗಿದೆ   

ಶಿರಸಿ: ಕೋವಿಡ್–19 ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಸರ್ಕಾರದ ಕ್ರಮಗಳಿಗೆ ಸಹಕರಿಸಬೇಕು ಜತೆಗೆ ದೇವತಾ ಉಪಾಸನೆಯೂ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ಮಠದಲ್ಲಿ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಅವರು ಶುಕ್ರವಾರ ಭಕ್ತರಿಗೆ ಮಾಹಿತಿ ನೀಡಿದ್ದಾರೆ.

ಸರ್ಕಾರದ ನಿಬಂಧನೆಯ ಮಿತಿಯಲ್ಲಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭಿಸಲಾಗಿದೆ. 400ಕ್ಕೂ ಹೆಚ್ಚು ವೈದಿಕರು ಒಂದೆರಡು ದಿನಗಳಲ್ಲಿ ಸಂಪನ್ನಗೊಳಿಸಬಹುದಾದ ಸಹಸ್ರಚಂಡಿ ಕಾರ್ಯಕ್ರಮವನ್ನು, ಈಗ ಕೆಲವೇ ವೈದಿಕರು ಮಾಡುತ್ತಿದ್ದಾರೆ. ಹೊರಗಿನಿಂದ ಯಾರನ್ನೂ ಕರೆಯದೇ, ಮಠದ ಪರಿವಾರದವರೇ ಈ ಕೈಂಕರ್ಯ ನೆರವೇರಿಸುತ್ತಿದ್ದಾರೆ. ಇದಕ್ಕೆ 25ಕ್ಕೂ ಹೆಚ್ಚು ದಿನ ಬೇಕಾಗಬಹುದು. ಅಲ್ಲದೇ, ಮೃತ್ಯುಂಜಯ ಹವನ, ಮಹಾರುದ್ರ ಹವನ, ಧನ್ವಂತರಿ ಹೋಮ, ಲಕ್ಷ್ಮಿನೃಸಿಂಹ ಹವನ, ವಿಷ್ಣು ಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.

ADVERTISEMENT

ಕೋವಿಡ್–19 ರೋಗಕ್ಕೆ ಔಷಧವಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಮುಖ್ಯ ಉಪಾಯ. ಆಧ್ಯಾತ್ಮಿಕ ಸಾಧನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರಾಣಾಯಾಮ, ಜಪ, ಧ್ಯಾನ, ಸ್ತೋತ್ರ, ಪೂಜೆ ಇವುಗಳನ್ನು ದಿನವೂ ತಪ್ಪದೇ ಮಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಆಧ್ಯಾತ್ಮಿಕ ಸಾಧನೆಯಿಂದ ದಿವ್ಯ ಪ್ರಭಾವಲಯ ಶರೀರಕ್ಕೆ ಉಂಟಾಗುತ್ತದೆ. ಇದು ನಮ್ಮ ಮೇಲೆ ಎರಗುವ ಮಹಾರೋಗಗಳನ್ನು ತಡೆಯುತ್ತದೆ. ದೃಷ್ಟ ಹಾಗೂ ಅದೃಷ್ಟ ಅಂದರೆ, ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಎರಡೂ ರೀತಿಯ ಪ್ರಯತ್ನಗಳು ಒಟ್ಟಿಗೆ ಸೇರಿದಾಗ ಈ ಆಪತ್ತನ್ನು ದಾಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.