ADVERTISEMENT

ನೌಕಾಪಡೆಯಿಂದ ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಾಚರಣೆ 

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 8:32 IST
Last Updated 11 ಆಗಸ್ಟ್ 2019, 8:32 IST
   

ಬೆಳಗಾವಿ: ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿರುವ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರತೀಯ ನೌಕಾಪಡೆ ಕೈಗೊಂಡಿರುವ ರಕ್ಷಣಾ ಕಾರ್ಯಗಳ ಕುರಿತು ಕಾರವಾರದಲ್ಲಿರುವ ನೌಕಾ ನೆಲೆಯ ಫ್ಲ್ಯಾಗ್‌ ಆಫೀಸರ್‌, ರೇರ್‌ ಅಡ್ಮಿರಲ್ ಮಹೇಶ ಸಿಂಗ್‌ ವಿಡಿಯೊ ಕ್ಲಿಪಿಂಗ್‌ನಲ್ಲಿ ಮಾಹಿತಿ ನೀಡಿದ್ದಾರೆ.

‘ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ನೆರೆಯಿಂದ ತತ್ತರಿಸಿ ಹೋಗಿರುವ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಸಹಾಯ ನೀಡುವಂತೆ ಇವೆರಡೂ ಜಿಲ್ಲೆಗಳ ಜಿಲ್ಲಾಡಳಿತವು ಮನವಿ ಮಾಡಿಕೊಂಡಿತ್ತು. ಅವರ ಮನವಿಯ ಮೇರೆಗೆ ಭಾರತೀಯ ನೌಕಾಪಡೆಯು 8 ರಕ್ಷಣಾ ತಂಡಗಳನ್ನು ಹಾಗೂ 2 ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ಇಳಿಸಿದೆ.

‘ಬೆಳಗಾವಿ ಜಿಲ್ಲೆಯಲ್ಲಿ 3 ತಂಡಗಳು ಎಲ್ಲ ಜೀವ ರಕ್ಷಕ ಸಾಮಗ್ರಿಗಳೊಂದಿಗೆ ಕಾರ್ಯಾಚರಣೆ ಮಾಡುತ್ತಿವೆ. ರಾಷ್ಟ್ರೀಯ ವಿಕೋಪ ಪರಿಹಾರ ತಂಡ ಹಾಗೂ ಭಾರತೀಯ ಸೇನೆಯ ಸಹಯೋಗದಲ್ಲಿ ಒಂದು ಹೆಲಿಕಾಪ್ಟರ್‌ ಕಾರ್ಯನಿರ್ವಹಿಸುತ್ತಿದೆ.

ADVERTISEMENT

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ಜಲಮಾರ್ಗದ ಮೂಲಕವೇ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆಗಸ್ಟ್‌ 6ರಿಂದ ಎಳ್ಳಷ್ಟೂ ಬಿಡುವು ನೀಡದೇ ಕಾರ್ಯ ನಿರ್ವಹಿಸಲಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 2,200 ಜನರನ್ನು ರಕ್ಷಿಸಲಾಗಿದ್ದು, ಜಿಲ್ಲಾಡಳಿತವು ಸ್ಥಾಪಿಸಿರುವ ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ರವಾನಿಸಲಾಗಿದೆ.
ಕೈಗಾ ಅಣುವಿದ್ಯುತ್‌ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸುರಕ್ಷಿತ ಸ್ಥಳಗಳಿಗೆ ಬಿಟ್ಟುಬರಲಾಗಿದೆ. ಅಪಾರ ಪ್ರಮಾಣದ ನೀರಿನಿಂದ ಆವೃತವಾಗಿರುವ ಕೈಗಾ ಟೌನ್‌ಶಿಪ್‌ನಲ್ಲಿ ಸಿಲುಕಿಕೊಂಡಿರುವವರಿಗೆ ಆಹಾರ, ನೀರು, ಔಷಧಿಗಳನ್ನು ತಲುಪಿಸಲಾಗಿದೆ.

‘ನಿನ್ನೆಯಿಂದ ನೀರಿನ ಹರಿವು ಇಳಿಮುಖವಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಸಾಮಾನ್ಯ ಸ್ಥಿತಿ ಮರಳುವವರೆಗೆ ಜಿಲ್ಲಾಡಳಿತದ ಜೊತೆ ಸತತ ಸಂಪರ್ಕದಲ್ಲಿ ಇದ್ದು, ಜನರ ರಕ್ಷಣಾ ಕಾರ್ಯವನ್ನು ಮುಂದುವರಿಸುತ್ತೇವೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.