ADVERTISEMENT

ಸಿದ್ದಿ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ ಸ್ಥಾಪನೆ: ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 5:18 IST
Last Updated 9 ಡಿಸೆಂಬರ್ 2022, 5:18 IST
ಯಲ್ಲಾಪುರ ತಾಲ್ಲೂಕಿನ ಮಾಗೂಡಿನ ಕೆರೆಕುಂಬ್ರಿ ಗ್ರಾಮದಲ್ಲಿ ಸಚಿವ ಬಿ. ಶ್ರೀರಾಮುಲು ಗ್ರಾಮ ವಾಸ್ತವ್ಯ ಹೂಡಿದ್ದರು.
ಯಲ್ಲಾಪುರ ತಾಲ್ಲೂಕಿನ ಮಾಗೂಡಿನ ಕೆರೆಕುಂಬ್ರಿ ಗ್ರಾಮದಲ್ಲಿ ಸಚಿವ ಬಿ. ಶ್ರೀರಾಮುಲು ಗ್ರಾಮ ವಾಸ್ತವ್ಯ ಹೂಡಿದ್ದರು.   

ಯಲ್ಲಾಪುರ: 'ಪರಿಶಿಷ್ಟ ವರ್ಗದ ಸಿದ್ದಿ ಜನರಲ್ಲಿ ಸರ್ಕಾರವೇ ಅವರ ಮನೆ ಬಾಗಿಲಿಗೆ ಬಂದಿದೆ. ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಹಾಗೂ ಸರ್ಕಾರದ ಅನೇಕ ಸೌಲಭ್ಯಗಳನ್ನು ನೀಡುವುದು ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಈ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ' ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಮಾಗೂಡಿನ ಕೆರೆಕುಂಬ್ರಿ ಗ್ರಾಮದ ಲಕ್ಷ್ಮಿ ಸಿದ್ದಿ ಇವರ ಮನೆಯಲ್ಲಿ ಗುರುವಾರ ರಾತ್ರಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಶಿಕ್ಷಣದಿಂದ ಮಾತ್ರ ಈ ಸಮುದಾಯಗಳನ್ನು ಮೇಲಕ್ಕೆತ್ತಲು ಸಾಧ್ಯ. ಶಿಕ್ಷಣದ ಮೂಲಕ ಅಭದ್ರತೆ ಹೋಗಿ ಉತ್ತಮ ನಾಗರಿಕರಾಗಬೇಕು. ಇವರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವ ಉದ್ದೇಶಕ್ಕಾಗಿ ಈ ವರ್ಗದ ಮಕ್ಕಳಿಗಾಗಿ ಈ ಪ್ರದೇಶದಲ್ಲಿ ವಸತಿ ಶಾಲೆಯೊಂದನ್ನು ನಿರ್ಮಿಸಲಾಗುವುದು' ಎಂದು ತಿಳಿಸಿದ ಸಚಿವರು, 'ಈ ಸಿದ್ದಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪೌಷ್ಟಿಕ ಆಹಾರ ಸಿಗುವಂತೆ ಮಾಡುತ್ತೇನೆ' ಎಂದು ಭರವಸೆ ನೀಡಿದರು.

'ಸರ್ಕಾರ ಈ ವರ್ಗಗಳ ಮಿಸಲಾತಿಯನ್ನು ಶೇ ಮೂರರಿಂದ ಶೇ ಏಳಕ್ಕೇರಿಸಿದ್ದು, ಈ ಗ್ರಾಮ ವಾಸ್ತವ್ಯದಲ್ಲಿ ಸರ್ಕಾರದ ಅನೇಕ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ಬುಡಕಟ್ಟು ಜನರ ಜನಪದ ಕಲೆಗಳನ್ನು ಉಳಿಸಲು ರಾಜ್ಯಮಟ್ಟದ ಕಲಾಮೇಳ ಹಮ್ಮಿಕೊಳ್ಳಲಾಗಿದೆ. ಅದರಂತೆ ಕಲೆಗೆ ಆದ್ಯತೆ ನೀಡುವ ಉದ್ದೇಶದಿಂದ ರಾಷ್ಟ್ರಮಟ್ಟದ ಬುಡಕಟ್ಟು ಜನರ ಸಮಾವೇಶವನ್ನು ಸದ್ಯದಲ್ಲೇ ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ' ಎಂದರು.

ADVERTISEMENT

'ಮುಖ್ಯಮಂತ್ರಿ ಅವರು ಪರಿಶಿಷ್ಟ ವರ್ಗದವರಿಗಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಪರಿಶಿಷ್ಟ ವರ್ಗ ಬೆರೆತಿದ್ದ ಕಾರಣ ಇವರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಪ್ರತ್ಯೇಕ ಸಚಿವಾಲಯ ನಿರ್ಮಾಣ ಮಾಡಿರುವುದರಿಂದ ಅವರ ಅಭಿವೃದ್ಧಿ ಸುಲಭ ಸಾಧ್ಯವಾಗಿದೆ' ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾ ರಾಮ ಸಿದ್ದಿ ನಿಗಮದ ನಿರ್ದೇಶಕರಾದ ಕಾಂತರಾಜು, ವಾದಿರಾಜ್, ಕವಿತಾ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಸಂಜೆ 7.30ಕ್ಕೆ ಬರಬೇಕಾಗಿದ್ದ ಸಚಿವ ಶ್ರೀರಾಮುಲು ರಾತ್ರಿ 10ಕ್ಕೆ ಯಲ್ಲಾಪುರ ಪಟ್ಟಣಕ್ಕೆ ಬಂದರು. ಪರಿಶಿಷ್ಟ ವರ್ಗದವರ ಅಹವಾಲು ಸ್ವೀಕರಿಸಿ, 10.30ಕ್ಕೆ ಮಾಗೋಡು ತಲುಪಿದರು. ಸಚಿವರನ್ನು ಸಿದ್ದಿ ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತಿಸಲಾಯಿತು. ನೆಲದ ಮೇಲೆ ಕುಳಿತು ಕುಟುಂಬದವರು ಹಾಗೂ ಸಮುದಾಯದವರು, ಸ್ಥಳಿಯರೊಂದಿಗೆ ಸಮಾಲೋಚನೆ ನಡೆಸಿದರು. ಕೆಲಕಾಲ ನೃತ್ಯ, ಭಜನೆ ವೀಕ್ಷಿಸಿ ಲಕ್ಷ್ಮಿ ಸಿದ್ದಿ ಅವರ ಮನೆಯ ನೆಲದ ಮೇಲೆ ಹಾಸಿದ್ದ ಹಾಸಿನಲ್ಲಿ ಮಲಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.