ADVERTISEMENT

ಆದೇಶ ಹಿಂಪಡೆಯಲು ಒತ್ತಾಯ: ನಾರಾಯಣಗುರು ನಿವಾಸಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 13:08 IST
Last Updated 18 ಫೆಬ್ರುವರಿ 2020, 13:08 IST
ಶಿರಸಿಯ ಚಿಪಗಿ ನಾರಾಯಣಗುರು ನಗರದ ನಿವಾಸಿಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು
ಶಿರಸಿಯ ಚಿಪಗಿ ನಾರಾಯಣಗುರು ನಗರದ ನಿವಾಸಿಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು   

ಶಿರಸಿ: ತಾಲ್ಲೂಕಿನ ಚಿಪಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾರಾಯಣಗುರುನಗರದ ಸರ್ವೆ ನಂಬರ್ 53ರ ನಿವೇಶನಗಳು ಡಿಸ್‌ಫಾರೆಸ್ಟ್ ಆಗಿಲ್ಲ ಎಂಬ ಕಾರಣವೊಡ್ಡಿ, ಯಾವುದೇ ವ್ಯವಹಾರ ನಡೆಸದಂತೆ ಕಂದಾಯ ಇಲಾಖೆ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ, ನಾರಾಯಣಗುರುನಗರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ವಿಕಾಸಾಶ್ರಮ ಬಯಲಿನಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ನಂತರ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಐದು ದಶಕಗಳಿಂದ ನಾರಾಯಣಗುರುನಗರದಲ್ಲಿ ಜನರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಅಲ್ಲದೇ ಕಂದಾಯ ಇಲಾಖೆಯಿಂದಲೇ ಇಲ್ಲಿನ ನಿವೇಶನಗಳಿಗೆ ಪಟ್ಟಾ ಹಂಚಿಕೆ ಮಾಡಲಾಗಿದೆ. ಆದರೆ, ಸುಮಾರು ಒಂದೂವರೆ ವರ್ಷದ ಹಿಂದೆ ಇದ್ದಕ್ಕಿದ್ದಂತೆ ಇಲ್ಲಿನ ನಿವೇಶನಗಳು ಡಿಸ್ ಫಾರೆಸ್ಟ್ ಆಗಿಲ್ಲದ ಕಾರಣ ನಿವೇಶನಗಳ ಮಾರಾಟ, ಖರೀದಿ, ಬ್ಯಾಂಕ್ ವ್ಯವಹಾರ ಇತ್ಯಾದಿಯನ್ನು ನಿಷೇಧಿಸಿ, ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಇದರಿಂದ, ನಿವೇಶನದ ಮೇಲೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮನೆ ಕಟ್ಟಿಕೊಂಡವರಿಗೆ, ಇದೇ ಆಸ್ತಿಯನ್ನು ನಂಬಿ ಬದುಕುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಂಕಷ್ಟವಾಗಿದೆ. ಹಾಗಾಗಿ ತಹಶೀಲ್ದಾರ್ ಹೊರಡಿಸಿರುವ ಆದೇಶವನ್ನು ಹಿಂಪಡೆಯಲು ಕೂಡಲೇ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಸಮಸ್ಯೆ ಬಗೆಹರಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಗೌರೀಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಉಮೇಶ ಬಂಕಾಪುರ, ಜೀವನ ಪೈ, ನಾಗರಾಜ ಶೆಟ್ಟಿ, ರಾಮಾ ಪೂಜಾರಿ, ಯೋಗೀಶ ನಾಯ್ಕ, ಸದಾನಂದ ಗೌಡರ, ಸುನಂದಾ ಗೌಡ, ನವೀನ ಶೆಟ್ಟಿ, ನಾಗರಾಜ ಶೆಟ್ಟಿ, ಪ್ರದೀಪ ಮೈಸೂರು, ಶಾಂತಲಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.