ADVERTISEMENT

'ಕಂದಾಯ ದಾಖಲೆಗಳು ಮನೆ ಬಾಗಿಲಿಗೆ' ಯೋಜನೆಗೆ ಸಚಿವ ಅಂಗಾರ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 11:15 IST
Last Updated 12 ಮಾರ್ಚ್ 2022, 11:15 IST
   

ಕಾರವಾರ: 'ದಾಖಲೆಗಳನ್ನು ಜನಸಾಮಾನ್ಯರ ಮನೆಗಳಿಗೇ ತಲುಪಿಸುವಂಥ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಲು ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು. ಸಮಸ್ಯೆಗಳಿರುವ ಗ್ರಾಮಗಳಿಗೆ ಭೇಟಿ ನೀಡಬೇಕು' ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್.ಅಂಗಾರ ಹೇಳಿದರು.

ತಾಲ್ಲೂಕಿನ ಅಸ್ನೋಟಿ ಗ್ರಾಮ ಪಂಚಾಯಿತಿಯ ಆರವ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾದ 'ಕಂದಾಯ ದಾಖಲೆಗಳು ಮನೆ ಬಾಗಿಲಿಗೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

'ರಾಜ್ಯದಲ್ಲಿ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮ ಮಟ್ಟದಲ್ಲಿ ಜನರಿಗೆ ಅಧಿಕಾರಿಗಳು ಸಿಗದೇ ದಾಖಲೆಗಳಿಗಾಗಿ ಪರದಾಡಬೇಕಾಗಿತ್ತು. ಅದನ್ನು ತಪ್ಪಿಸಲು ಪಹಣಿ, ಜಾತಿ ಪ್ರಮಾಣ ಪತ್ರ ಮುಂತಾದವನ್ನು ಮನೆಗೆ ಒಂದು ಬಾರಿ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಅರ್ಹರಿಗೆ ಸೌಲಭ್ಯ ಕೊಡಬೇಕು. ಆಗ ಆಡಳಿತದ ಮೇಲೆ ನಂಬಿಕೆ ಬರುತ್ತದೆ' ಎಂದರು.

ADVERTISEMENT

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, 'ಈ ಯೋಜನೆಯಿಂದ, ಜನ ದಾಖಲೆಗಳನ್ನು ಪಡೆಯಲು ಕಚೇರಿಗೆ ಅಲೆದಾಟ ತಪ್ಪಿಸಿದಂತಾಗಿದೆ. ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯವರು ಹೆಚ್ಚಿರುವ ಪ್ರದೇಶಗಳಲ್ಲಿ ಮನೆಗೇ ದಾಖಲೆ ನೀಡಲಾಗುತ್ತದೆ' ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, 'ಜಿಲ್ಲೆಯಲ್ಲಿ 2 ಲಕ್ಷ ದಾಖಲೆಗಳನ್ನು ಮಾರ್ಚ್ 26ರ ಮೊದಲು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ. ಕಾರವಾರ ತಾಲ್ಲೂಕಿನಲ್ಲಿ 3 ಸಾವಿರ ದಾಖಲೆಗಳನ್ನು ಗುರುತಿಸಲಾಗಿದೆ. ಅವೆಲ್ಲವನ್ನೂ ಮುಂದಿನ ಒಂದೆರಡು ದಿನಗಳಲ್ಲಿ ಎಲ್ಲ ಮನೆಗಳಿಗೆ ತಲುಪಿಸಲಾಗುತ್ತದೆ. ಪಡಿತರ ಚೀಟಿ, ಆಧಾರ್ ಕಾರ್ಡ್ ಜೋಡಣೆ ಆಗಿರದಿದ್ದರೆ ಗ್ರಾಮ ಲೆಕ್ಕಾಧಿಕಾರಿ ಸಂಪರ್ಕಿಸಿ ಒಂದು ವಾರ ಉಚಿತವಾಗಿ ಜೋಡಣೆ ಮಾಡಲಾಗುತ್ತದೆ' ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ ಕಾರ್ಯಕ್ರಮ ನಿರೂಪಿಸಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಅಸ್ನೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ ಕೊಠಾರಕರ್, ಉಪಾಧ್ಯಕ್ಷ ಸಂತೋಷ ಶ್ಯಾಮ ನಾಯ್ಕ, ತಹಶೀಲ್ದಾರ್ ನಿಶ್ಚಲ್ ನರೋನಾ, ಪ್ರಮುಖ ಪ್ರಕಾಶ ಅಸ್ನೋಟಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.