ADVERTISEMENT

ವಾರದೊಳಗೆ ಪರಿಷ್ಕೃತ ಕ್ರಿಯಾಯೋಜನೆ ಸಲ್ಲಿಸಿ: ಜಿ.ಪಂ ಸಿಇಒ ಸೂಚನೆ

ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:17 IST
Last Updated 20 ಅಕ್ಟೋಬರ್ 2025, 6:17 IST
ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಿಇಒ ಡಾ.ದಿಲೀಷ್ ಶಶಿ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಯಿತು.
ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಿಇಒ ಡಾ.ದಿಲೀಷ್ ಶಶಿ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಯಿತು.   

ಕಾರವಾರ: ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಸಿದ್ಧಪಡಿಸಿದ ಕ್ರಿಯಾಯೋಜನೆ ಪಟ್ಟಿ ಪರಿಷ್ಕರಿಸಿ, ಮರು ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಸಿದ ಅವರು ಮರುವರದಿ ಸಲ್ಲಿಕೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಒಂದು ವಾರದ ಗಡುವು ನೀಡಿದರು.

‘ಯೋಜನೆಯ ಅಗತ್ಯತೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದಂತೆ ಕಾಣಿಸುತ್ತಿಲ್ಲ. ನಿಯಮಾವಳಿಗಳನ್ನು ಪಾಲಿಸದೆ ಮತ್ತು ಸಂಬಂಧಪಟ್ಟ ಅನುಮೋದಿತ ದಾಖಲೆಗಳನ್ನು ಒದಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪವಾಗಿ ನಿರ್ವಹಿಸಲು ಅನುಕೂಲವಾಗುವಂತೆ ₹2 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲು ಮಂಜೂರಾತಿ ನೀಡಬೇಕಿದೆ. 118 ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸಮರ್ಪಕವಾಗಿ ಸಿದ್ಧಪಡಿಸಿ. ಅನುದಾನ ಅನಗತ್ಯ ಪೋಲಾಗುವುದನ್ನು ತಡೆಗಟ್ಟಿ’ ಎಂದರು.

‘ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ಜಲಮೂಲದ ಸ್ಥಳ ಬದಲಾವಣೆ, ಹೆಚ್ಚಿನ ಮನೆಗಳಿಗೆ ಸಂಪರ್ಕ ನೀಡಬೇಕಾದ ಸಂದರ್ಭದಲ್ಲಿ ಕಾಮಗಾರಿಗಳ ಪರಿಮಾಣಗಳಲ್ಲಿ ಉಂಟಾಗುವ ವ್ಯತ್ಯಾಸಗಳ ಕುರಿತು ವಿಳಂಬ ಮಾಡದೆ ಪ್ರಸ್ತಾವ ಸಲ್ಲಿಸಿ’ ಎಂದು ಸೂಚಿಸಿದರು.

‘ಜಲ ಜೀವನ್ ಮಿಷನ್ ಕಾಮಗಾರಿಗಳನ್ನು 4 ಹಂತದಲ್ಲಿ ಕೈಗೊಂಡಿದ್ದು ಒಟ್ಟು 965 ಕಾಮಗಾರಿಗಳ ಪೈಕಿ 956 ಕಾಮಗಾರಿಗಳು ಆರಂಭಗೊಂಡಿವೆ. ಅವುಗಳಲ್ಲಿ 718 ಕಾಮಗಾರಿಗಳನ್ನು ಪೂರ್ಣಗೊಳಿಸಿ, 657 ಕಾಮಗಾರಿಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಇಇ ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಧಾರವಾಡ ವಿಭಾಗದ ಮುಖ್ಯ ಎಂಜಿನಿಯರ್ ರೇಣುಕಾರಾಧ್ಯ ಸೊಪ್ಪಿನಮಠ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಲ್ಲಾ ಭಕಷ್, ಮುಖ್ಯ ಲೆಕ್ಕಾಧಿಕಾರಿ ಆನಂದ್‍ಸಾ ಹಬೀಬ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.