
ಶಿರಸಿ: ‘ಪರಿಸರ, ಜನಜೀವನಕ್ಕೆ ಮಾರಕವಾಗುವ ನದಿ ತಿರುವು ಯೋಜನೆ ಸ್ಥಗಿತದ ಕುರಿತು ನಾನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿರುವೆ. ಅದೇ ರೀತಿ ಯೋಜನೆ ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವ ತಾಕತ್ತು ಬಿಜೆಪಿ ಸಂಸದರಿಗೆ ಇದೆಯೇ’ ಎಂದು ಶಾಸಕ ಭೀಮಣ್ಣ ನಾಯ್ಕ ಪ್ರಶ್ನಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಉತ್ತರ ಕನ್ನಡ ಹಿಂದುಳಿದ ವರ್ಗಗಳ ಜಾಗೃತಿ ಅಭಿಯಾನ, ಸಂವಿಧಾನ ರಕ್ಷಾ ಅಭಿಯಾನ, ವಾಯ್ಸ್ ಆಫ್ ಒಬಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬೇಡ್ತಿ– ವರದಾ ನದಿ ತಿರುವು ಯೋಜನೆ ಮಾಡಿರುವುದು ಬಸವರಾಜ ಬೊಮ್ಮಾಯಿ. ಆಗ ಯೋಜನೆಯ ಬಗ್ಗೆ ಅಸಂಬದ್ದವಾಗಿ ಮಾತನಾಡಿ ಈಗ ಸುಮ್ಮನಿದ್ದಾರೆ’ ಎಂದರು.
‘ಉತ್ತರ ಕನ್ನಡ ಜಿಲ್ಲೆ ಹಲವು ಯೋಜನೆಗಳಿಗೆ ಭೂಮಿ ತ್ಯಾಗ ಮಾಡಿದ ಜಿಲ್ಲೆ. ಇಂಥ ಜಿಲ್ಲೆಗೆ ಮತ್ತೆ ಅನ್ಯಾಯ ಮಾಡಲು ನಾವು ಬಿಡುವುದಿಲ್ಲ. ಮಳೆ ಕೈಕೊಟ್ಟರೆ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಗ್ಯಾರಂಟಿ ಜಾರಿಯಿಂದ ಸರ್ಕಾರಕ್ಕೆ ಲಾಭ ಆಗಿದಿಯೇ ವಿನಾ ಹಾನಿಯಾಗಿಲ್ಲ. ಗ್ಯಾರಂಟಿಯೊಂದಿಗೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ಜಾರಿ ಮಾಡಿಯೇ ಬಿಜೆಪಿ ಸರ್ಕಾರ ಕೆಲವೊಂದು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರಕ್ಕೆ ಬಂದ ಒಂದೆರಡು ತಿಂಗಳಲ್ಲಿ ಗ್ಯಾರಂಟಿ ಕಸಿದುಕೊಂಡಿದೆ. ಆದರೆ ನಾವು ಗ್ಯಾರಂಟಿಯನ್ನು ಕೈಬಿಟ್ಟಿಲ್ಲ, ಬಿಡುವುದೂ ಇಲ್ಲ’ ಎಂದ ಅವರು, ‘ನಗರದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮೇಲೆ ಹೊಂಡ ಬಿದ್ದರೆ ಅದಕ್ಕೆ ನಾನು ಜವಾಬ್ದಾರಿಯಲ್ಲ. ಅದನ್ನು ಸಂಸದರಿಗೆ ಕೇಳಬೇಕು. ಆದರೆ ನನಗೆ ಸಂಬಂಧಪಟ್ಟ ರಸ್ತೆಗಳನ್ನು ಒಂದೆರಡು ದಿನಗಳಲ್ಲಿ ದುರಸ್ತಿ ಮಾಡಿಸಲು ಈಗಾಗಲೇ ಸೂಚನೆ ನೀಡಿದ್ದೇನೆ’ ಎಂದರು.
ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷರಾದ ಉಮಾಪತಿ, ಬಿ.ಆರ್. ನಾಯ್ಕ, ಮಾಜಿ ಶಾಸಕ ವಿ.ಎಸ್. ಪಾಟೀಲ, ಹಿಂದುಳಿದ ವರ್ಗಗಳ ವೇದಿಕೆಯ ರಾಷ್ಟ್ರೀಯ ಸಂಚಾಲಕ ನಾಗರಾಜ ನಾರ್ವೆಕರ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಾಯಿನಾಥ ಗಾಂವಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಹಿಂದುಳಿಗ ವರ್ಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಲಚಂದ್ರ ನಾಯ್ಕ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಗೀತಾ ಶೆಟ್ಟಿ ಇದ್ದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಕಾರ್ಯಕರ್ತರು ಸಿದ್ದರಾಗಿರಬೇಕು. ಸರ್ಕಾರದ ಸಾಧನೆ ಜನರಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರದ್ದುಭೀಮಣ್ಣ ನಾಯ್ಕ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.