ADVERTISEMENT

ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ: ಪಶ್ಚಿಮಘಟ್ಟಕ್ಕೆ ಕೊಡಲಿ ಪೆಟ್ಟು

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:27 IST
Last Updated 6 ಜನವರಿ 2026, 7:27 IST
ನದಿ ಜೋಡಣೆ ಯೋಜನೆ ವಿರೋಧಿಸಿ ಶಿರಸಿಯಲ್ಲಿ ಜ.11ರಂದು ನಡೆಯುವ ಬೃಹತ್ ಜನ ಸಮಾವೇಶದ ಆಮಂತ್ರಣವನ್ನು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬಿಡುಗಡೆಗೊಳಿಸಿದರು
ನದಿ ಜೋಡಣೆ ಯೋಜನೆ ವಿರೋಧಿಸಿ ಶಿರಸಿಯಲ್ಲಿ ಜ.11ರಂದು ನಡೆಯುವ ಬೃಹತ್ ಜನ ಸಮಾವೇಶದ ಆಮಂತ್ರಣವನ್ನು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬಿಡುಗಡೆಗೊಳಿಸಿದರು   

ಶಿರಸಿ: 'ಜೀವವೈವಿಧ್ಯಕ್ಕೆ ಮಾರಕವಾಗಿರುವ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿ ಜ.11ರಂದು ಬೃಹತ್ ಜನ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, 20 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ಮೂಲಕ ಯೋಜನೆ ವಿರುದ್ಧ ಬೃಹತ್ ಹೋರಾಟಕ್ಕೆ ನಾಂದಿ ಹಾಡಲಿದ್ದಾರೆ’ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಎಚ್ಚರಿಸಿದರು.

​ಸೋಮವಾರ ನಗರದ ಟಿಎಂಎಸ್ ಸಭಾಂಗಣದಲ್ಲಿ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, 'ಸರ್ಕಾರವು ಕುಡಿಯುವ ನೀರು ಮತ್ತು ಕೃಷಿ ನೀರಾವರಿಯ ನೆಪವೊಡ್ಡಿ ನದಿ ಜೋಡಣೆ ವಿಸ್ತ್ರತ ಯೋಜನಾ ವರದಿ  ಸಿದ್ಧಪಡಿಸಲು ಮುಂದಾಗಿದೆ. ಆದರೆ ಈ ಯೋಜನೆಯಲ್ಲಿ ಮೂರು ಬೃಹತ್ ಜಲಾಶಯಗಳು, ಕಿಲೋಮೀಟರ್‌ಗಟ್ಟಲೆ ಉದ್ದದ ಸುರಂಗ ಮಾರ್ಗ ಹಾಗೂ ಕಾಲುವೆಗಳ ನಿರ್ಮಾಣ ಒಳಗೊಂಡಿದೆ. ಇದು ಜಾರಿಯಾದಲ್ಲಿ ಲಕ್ಷಾಂತರ ಎಕರೆ ದಟ್ಟ ಅರಣ್ಯ ಮತ್ತು ಪರಿಸರ ನಾಶವಾಗುವುದು ನಿಶ್ಚಿತ. ಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳು ತಮ್ಮ ಅಸ್ತಿತ್ವಕ್ಕಾಗಿ ಈ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ' ಎಂದು ಅವರು ಹೇಳಿದರು.

'ನದಿಗಳಲ್ಲಿ ಕನಿಷ್ಠ ಶೇಕಡಾ 30ರಷ್ಟು ಸ್ವಾಭಾವಿಕ ಪ್ರವಾಹವಿದ್ದರೆ ಮಾತ್ರ ನೀರು ಕೊಂಡೊಯ್ಯಲು ಸಾಧ್ಯ ಎಂಬ ನಿಯಮವಿದೆ. ಆದರೆ ಜಿಲ್ಲೆಯ ನದಿಗಳಲ್ಲಿ ಬೇಸಿಗೆಯ ಸಮಯದಲ್ಲಿ ಸ್ಥಳೀಯರಿಗೇ ಕುಡಿಯುವ ನೀರಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನೀರು ವರ್ಗಾವಣೆ ಮಾಡುವುದು ಅವೈಜ್ಞಾನಿಕ' ಎಂದು ಅವರು ಹೇಳಿದರು. 

​ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, 'ಈಗಾಗಲೇ 40ಕ್ಕೂ ಹೆಚ್ಚು ಕಡೆಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಹಲವು ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸಚಿವರಿಗೂ ಮಾಹಿತಿ ನೀಡಲಾಗಿದೆ.  ಈ ಸಮಾವೇಶದ ನಂತರ ಕೇಂದ್ರ ಸರ್ಕಾರಕ್ಕೂ ನಿಯೋಗದ ಮೂಲಕ ತೆರಳಿ ಯೋಜನೆಯಿಂದಾಗುವ ಹಾನಿಯ ಕುರಿತು ಮನವರಿಕೆ ಮಾಡಿಕೊಡಲಾಗುವುದು' ಎಂದರು. 

ADVERTISEMENT

ಕಾರ್ಯಕ್ರಮದಲ್ಲಿ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ, ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

‘ಪಶ್ಚಿಮಘಟ್ಟ ಉಳಿಸಿ: ಉತ್ತರ ಕನ್ನಡ ರಕ್ಷಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಜನ ಸಮಾವೇಶವು ಜಿಲ್ಲೆಯ ಜನರ ಹಕ್ಕೊತ್ತಾಯದ ಧ್ವನಿಯಾಗಲಿದೆ.
ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ

ಭಾಗವಹಿಸುವ ಸ್ವಾಮೀಜಿಗಳು ಮತ್ತು ಜನಪ್ರತಿನಿಧಿಗಳು

 ಅಂದು ಎಂಇಎಸ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಸಮಾವೇಶ ನಡೆಯಲಿದೆ.  ಸ್ವರ್ಣವಲ್ಲೀ ಸ್ವಾಮೀಜಿ ಜತೆಗೆ ನೆಲೆಮಾಂವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಶ್ರೀಪಾದರು ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಜಡೆ ಮಠದ ಮಹಾಂತ ಸ್ವಾಮೀಜಿ ಹಾಗೂ ಶಿರಳಗಿ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.   ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾರ್ಗದರ್ಶನ ನೀಡಲಿದ್ದಾರೆ. ಇವರ ಜತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಶಿವರಾಮ ಹೆಬ್ಬಾರ ಭೀಮಣ್ಣ ನಾಯ್ಕ ಸತೀಶ ಸೈಲ್ ದಿನಕರ ಶೆಟ್ಟಿ ಗಣಪತಿ ಉಳ್ವೇಕರ ಮತ್ತು ಶಾಂತಾರಾಮ ಸಿದ್ದಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ' ಎಂದು ಸಮಿತಿ ಪ್ರಮುಖ ಅನಂತ ಅಶೀಸರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.