ADVERTISEMENT

ಗಟಾರ ನಿರ್ಮಾಣಕ್ಕಾಗಿ ರಸ್ತೆ ಜಾಗ ತೆರವು ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 14:56 IST
Last Updated 10 ಮಾರ್ಚ್ 2022, 14:56 IST
ಕುಮಟಾ ಪಟ್ಟಣದ ಬಸ್ತಿಪೇಟೆ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಾಗಿ ಪುರಸಭೆ ಅಧಿಕಾರಿಗಳು ಬುಧವಾರ ರಸ್ತೆ ಜಾಗ ತೆರವುಗೊಳಿಸಿದರು
ಕುಮಟಾ ಪಟ್ಟಣದ ಬಸ್ತಿಪೇಟೆ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಾಗಿ ಪುರಸಭೆ ಅಧಿಕಾರಿಗಳು ಬುಧವಾರ ರಸ್ತೆ ಜಾಗ ತೆರವುಗೊಳಿಸಿದರು   

ಕುಮಟಾ: ಪಟ್ಟಣದ ಬಸ್ತಿಪೇಟೆ ರಸ್ತೆಯ ಬಾಳಗಿ ಮೆಡಿಕಲ್ ಸ್ಟೋರ್ಸ್‌ನಿಂದ ಪುರಸಭೆ ಕಚೇರಿವರೆಗೆ ಹೊಸ ಗಟಾರ ನಿರ್ಮಾಣ ಕಾಮಗಾರಿಗಾಗಿ ಬುಧವಾರ ಪುರಸಭೆ ಅಧಿಕಾರಿಗಳು ರಸ್ತೆ ಜಾಗ ತೆರವುಗೊಳಿಸಿದರು.

2003-04ರ ಮಹಾ ಯೋಜನೆಯಂತೆ ರಸ್ತೆಯನ್ನು 12 ಮೀಟರ್ ವಿಸ್ತರಣೆಯ ಅನುಷ್ಠಾನಕ್ಕೆ ಪುರಸಭ ಮುಂದಾಗಿದೆ. ರಸ್ತೆ ಜಾಗದಲ್ಲಿ ಕಬ್ಬಿಣದ ಕಂಬ ಹಾಗೂ ತಗಡು ಹಾಕಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಚಾವಣಿಯನ್ನು ಕೆಲ ವ್ಯಾಪಾರಸ್ಥರು ಪ್ರೇರಣೆಯಿಂದ ತೆರವುಗೊಳಿಸಿದ್ದಾರೆ. ಇನ್ನು ಕೆಲ ಅಂಗಡಿಕಾರರಿಗೆ ತಿಳಿ ಹೇಳಿದಾಗ ನಂತರ ಅವರೂ ತೆರವು ಕಾರ್ಯಕ್ಕೆ ಸಹಕರಿಸಿದ್ದಾರೆ. ಆದರೆ ಇದೇ ರಸ್ತೆಯಲ್ಲಿ ಕಟ್ಟಡದ ಮುಂದೆ ಖಾಲಿ ಜಾಗ ಹೊಂದಿರುವ ವಕೀಲ ವೈ.ವಿ.ಶಾನಭಾಗ, ಮಹಾಲಕ್ಷ್ಮೀ ಜನರಲ್ ಸ್ಟೋರ್ಸ್ ಮಾಲೀಕರು, ಗೋವಿಂದರಾಯ ಶ್ರೀನಿವಾಸ ಶಾನಭಾಗ ಹಾಗೂ ಬಸ್ತಿ ಮಲಿಕ್ ಅವರು ರಸ್ತೆ ಕಾಮಗಾರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು.

ಇದು ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ನಿಯಮಾನುಸಾರ ರಸ್ತೆಯ ಎರಡೂ ಬದಿ ಸೇರಿ 18 ಮೀಟರ್ ವಿಸ್ತರಣೆಗೆ ಅವಕಾಶವಿದೆ. ತಡೆಯಾಜ್ಞೆ ತಂದಿರುವವರ ವಿರುದ್ಧ ರಸ್ತೆಯ ಒಂದು ಬದಿಗೆ 9 ಮೀಟರ್ ಜಾಗ ಭೂ ಸ್ವಾಧೀನಕ್ಕೆ ನ್ಯಾಯಾಲಯಕ್ಕೆ ಅರ್ಜಿ ನೀಡಲಾಗಿದೆ. ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಕೊಳ್ಳದಂತೆ ನಿಗಾ ಇಡಲು ಪುರಸಭೆಯ ಮಾಸಿಕ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.