ADVERTISEMENT

ಅಡಿಕೆಗೆ ಕೊಳೆ ರೋಗ ಉಲ್ಬಣ

ತೋಟಗಳಿಗೆ ಭೇಟಿ ನೀಡುತ್ತಿರುವ ತೋಟಗಾರಿಕಾ ಇಲಾಖೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 11:35 IST
Last Updated 16 ಆಗಸ್ಟ್ 2019, 11:35 IST
ಶಿರಸಿ ತಾಲ್ಲೂಕಿನ ಕೋಣೆಸರದ ತೋಟಕ್ಕೆ ವಿ.ಎಂ.ಹೆಗಡೆ ಭೇಟಿ ನೀಡಿ ಪರಿಶೀಲಿಸಿದರು
ಶಿರಸಿ ತಾಲ್ಲೂಕಿನ ಕೋಣೆಸರದ ತೋಟಕ್ಕೆ ವಿ.ಎಂ.ಹೆಗಡೆ ಭೇಟಿ ನೀಡಿ ಪರಿಶೀಲಿಸಿದರು   

ಶಿರಸಿ: ನಿರಂತರವಾಗಿ ಸುರಿದ ಮಳೆಯ ಪರಿಣಾಮ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಕೊಳೆ ರೋಗ ಉಲ್ಬಣಗೊಂಡಿದೆ. ಶೇ 70ಕ್ಕೂ ಹೆಚ್ಚು ಭಾಗದಲ್ಲಿ ಕೊಳೆ ರೋಗ ವ್ಯಾಪಿಸಿದೆ.

ವಾನಳ್ಳಿ, ಸಂಪಖಂಡ, ಅಮ್ಮಿನಳ್ಳಿ, ನೀರ್ನಳ್ಳಿ, ಸೋಂದಾ ಭಾಗದಲ್ಲಿ ಈ ರೋಗ ಇನ್ನಷ್ಟು ಹೆಚ್ಚಾಗಿದೆ. ತೋಟಗಾರಿಕಾ ಇಲಾಖೆ ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞ ವಿ.ಎಂ.ಹೆಗಡೆ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಾನಂದ ರಾಯರ ಅವರು ಶುಕ್ರವಾರ, ಸೋಂದಾ ಸಮೀಪ ಕೋಣೆಸರದ ತೋಟಗಳಿಗೆ ಭೇಟಿ ನೀಡಿದರು.

ಇಲ್ಲಿನ 12ರಷ್ಟು ರೈತರ ಒಟ್ಟು 30 ಎಕರೆ ತೋಟದಲ್ಲಿ, ಸುಮಾರು 20 ಎಕರೆಗೆ ಕೊಳೆ ರೋಗ ಹರಡಿದೆ. ‘ಶೇ 75ರಷ್ಟು ಅಡಿಕೆ ರೋಗದಿಂದ ಉದುರಿದೆ. ಪೂರ್ವಭಾವಿಯಾಗಿ ಒಮ್ಮೆ ಬಯೊಫೈಟ್ ಹಾಗೂ ಬೋರ್ಡೊ ಮಿಶ್ರಣ ಸಿಂಪರಣೆ ಮಾಡಿದ್ದರೂ, ಈ ಪ್ರಮಾಣದಲ್ಲಿ ಕೊಳೆ ಬಂದಿದೆ. ಮದ್ದು ಹೊಡೆಯಲು ಕಾರ್ಮಿಕರ ಕೊರತೆ ಇರುವುದರಿಂದ, ಮತ್ತೆ ಮದ್ದು ಹೊಡೆಸುವುದು ಕೂಡ ಕಷ್ಟ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತೋಟ ಹಾಳಾಗಿದೆ. ಮಳೆಗಾಲದಲ್ಲಿ ರೋಗದಿಂದ ಅಡಿಕೆ ಉದುರಿದೆ. ರೈತರ ಪರಿಸ್ಥಿತಿ ಗಂಭೀರವಾಗಿದೆ’ ಎಂದು ರೈತ ಪ್ರಭಾಕರ ಹೆಗಡೆ ಹೇಳಿದರು.

ADVERTISEMENT

ರೈತರಿಗೆ ಸಲಹೆ ನೀಡಿದ ವಿ.ಎಂ. ಹೆಗಡೆ ಅವರು, ‘ಕಳೆದ ವರ್ಷ ಕೊಳೆ ರೋಗ ಬಂದ ತೋಟಗಳಲ್ಲಿ ರೋಗಾಣು ಸುಪ್ತಾವಸ್ಥೆಯಲ್ಲಿದೆ. ಈಗ ಪೂರಕ ವಾತಾವರಣವಿರುವುದರಿಂದ ಒಮ್ಮೆಲೇ ತೀವ್ರವಾಗಿದೆ. ಇದು ಗಾಳಿಯ ಮುಖಾಂತರ ಹರಡುತ್ತ ಹೋಗುತ್ತದೆ. ಆದ್ದರಿಂದ ರೈತರು, ರೋಗ ಬಂದಿರುವ ತೋಟಗಳಲ್ಲಿ, ಮಳೆ ಬಿಡುವು ಕೊಟ್ಟಾಗ ಅಂತರವ್ಯಾಪಿ ಶಿಲೀಂದ್ರನಾಶಕವಾದ ಮೆಟಾಲಾಕ್ಷಿಲ್ 35 ಡಬ್ಲ್ಯೂಎಸ್ 1 ಗ್ರಾಂ ಅಥವಾ ಮೆಟಾಲಾಕ್ಷಿಲ್‌ ಎಂ.ಝಡ್ 2 ಗ್ರಾಂ ಪ್ರತಿ ಲೀಟರ್‌ ನೀರಿಗೆ ಸೇರಿಸಿ, ಗೊನೆಗೆ ಮತ್ತು ಎಲೆಗಳಿಗೆ ಸಿಂಪಡಿಸಬೇಕು. ಇದರಿಂದ ಮುಂದೆ ಚಂಡೆ ಕೊಳೆ ರೋಗ ಬಾರದಂತೆ ತಡೆಗಟ್ಟಬಹುದು. ನಂತರ ಒಂದು ವಾರದೊಳಗೆ ಶೇ1ರ ಬೋರ್ಡೊ ದ್ರಾವಣ ಸಿಂಪಡಿಸಬೇಕು’ ಎಂದರು.

ರೈತರಾದ ಕಮಲಾಕರ ಹೆಗಡೆ, ವಿಶ್ವನಾಥ ಹೆಗಡೆ, ಪ್ರಶಾಂತ ಹೆಗಡೆ, ಶ್ರೀಧರ ಹೆಗಡೆ, ಸುಬ್ರಮಣ್ಯ ಹೆಗಡೆ, ಕೃಷ್ಣ ಹೆಗಡೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.