ADVERTISEMENT

‘ಪ್ರೇಕ್ಷಕರ ಅಭಿರುಚಿಗೆ ಮಾನ್ಯತೆ ಅನಿವಾರ್ಯ’

ಹೊನ್ನಾವರ: ಕೆರೆಕೋಣದಲ್ಲಿ ನಡೆದ ‘ಸಹಯಾನ ಸಾಹಿತ್ಯೋತ್ಸವ–10’ರಲ್ಲಿ ಸಂವಾದ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 14:01 IST
Last Updated 9 ಫೆಬ್ರುವರಿ 2020, 14:01 IST
ಹೊನ್ನಾವರ ತಾಲ್ಲೂಕಿನ ಕೆರೆಕೋಣಿನಲ್ಲಿ ಭಾನುವಾರ ನಡೆದ ‘ಸಹಯಾನ ಸಾಹಿತ್ಯೋತ್ಸವ’ದಲ್ಲಿ ಉಪನ್ಯಾಸಕ ಪ್ರದೀಪ ಕೆಂಚನೂರು ಮಾತನಾಡಿದರು
ಹೊನ್ನಾವರ ತಾಲ್ಲೂಕಿನ ಕೆರೆಕೋಣಿನಲ್ಲಿ ಭಾನುವಾರ ನಡೆದ ‘ಸಹಯಾನ ಸಾಹಿತ್ಯೋತ್ಸವ’ದಲ್ಲಿ ಉಪನ್ಯಾಸಕ ಪ್ರದೀಪ ಕೆಂಚನೂರು ಮಾತನಾಡಿದರು   

ಹೊನ್ನಾವರ: ‘ಸಿನಿಮಾದಲ್ಲಿ ಉಳಿದ ಕಲಾ ಪ್ರಕಾರಗಳಿಗಿಂತ ಪ್ರೇಕ್ಷಕರ ಅಭಿರುಚಿಗೆ ಹೆಚ್ಚಿನ ಮಾನ್ಯತೆ ಕೊಡುವ ಅನಿವಾರ್ಯತೆ ಇದೆ’ ಎಂದು ಹಿರಿಯ ಸಂಸ್ಕೃತಿ ಚಿಂತಕ ಪ್ರೊ.ಕೆ.ಫಣಿರಾಜ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೆರೆಕೋಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ‘ಸಹಯಾನ ಸಾಹಿತ್ಯೋತ್ಸವ–10 ಸಿನಿಮಾ ಹೊಸ ತಲೆಮಾರು’‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಲೆಯಾಳಂ ಸಿನಿಮಾ ಹಳ್ಳಿಯನ್ನು ತಲುಪಿದ್ದರಿಂದ ಅಲ್ಲಿ ಹೊಸ ಪ್ರೇಕ್ಷಕ ವರ್ಗ ಸೃಷ್ಟಿಯಾಯಿತು. ಪ್ರೇಕ್ಷಕರೊಂದಿಗೆ ಸಂವಾದಿಸಿ ಅವರಲ್ಲಿಅಭಿರುಚಿಬೆಳೆಸಬೇಕಿದೆ. ಇದಕ್ಕಾಗಿಕನ್ನಡ ಸಿನಿಮಾಗಳಲ್ಲಿ ಅಂಥದೊಂದು ಚಳವಳಿಯ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ಉಪನ್ಯಾಸಕ ಪ್ರದೀಪ ಕೆಂಚನೂರ ಮಾತನಾಡಿ, ‘ನಿಸರ್ಗದಲ್ಲಿದ್ದಂತೆ ಸಿನಿಮಾಕ್ಕೆ ಮುಗಿಯದ ಹಾಗೂ ಬಹುವಿಧದ ಸಾಧ್ಯತೆಗಳಿವೆ. ಸುತ್ತಲಿನ ಸಾಮಾಜಿಕ ವಾಸ್ತವತೆಗೆ ಸ್ಪಂದಿಸುವ ಸಿನಿಮಾ ಇಂದು ಬೇಕು. ಬೆಂಗಳೂರು, ಮೈಸೂರಿಗೆ ಸೀಮಿತವಾಗಿರುವ ಕನ್ನಡ ಸಿನಿಮಾಗಳು, ನಾಡಿನ ಇತರಪ್ರದೇಶಗಳನ್ನು ಪ್ರತಿನಿಧಿಸಲು ವಿಫಲವಾಗಿವೆ. ಇರಾನ್, ಜಪಾನ್ ಮೊದಲಾದ ದೇಶಗಳ ಸಿನಿಮಾಗಳು ಆ ದೇಶಗಳ ಬಗೆಗಿನ ಪೂರ್ವಗ್ರಹ ದೂರಮಾಡುವ ಗುಣಮಟ್ಟ ಹೊಂದಿವೆ. ಕಲಾತ್ಮಕ ಹಾಗೂ ವಾಣಿಜ್ಯ ಸಿನಿಮಾ ಎಂಬ ವರ್ಗೀಕರಣ ಸರಿಯಲ್ಲ’ ಎಂದುಅಭಿಪ್ರಾಯಪಟ್ಟರು.

ಪತ್ರಕರ್ತ ಅಮ್ಮೆಂಬಳ ಆನಂದ ಮಾತನಾಡಿ, ‘ಹಿಂದಿನದನ್ನು ನೆನಪಿಸಿಕೊಳ್ಳುವವರು ಹಾಗೂ ಭವಿಷ್ಯದ ಮುನ್ನೋಟದೊಂದಿಗೆ ಮುನ್ನಡೆಸುವವರು ಮರೆಯಾಗುತ್ತಿದ್ದಾರೆ.‌ ಪೌರತ್ವ ತಿದ್ದುಪಡಿ ಕಾಯ್ದೆಜಾರಿ ಯತ್ನದ ಮೂಲಕ ದೇಶದ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ.ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರೂಸೇರಿದಂತೆಅರ್ಧಕ್ಕಿಂತ ಹೆಚ್ಚಿನ ಭಾರತೀಯರು ಭಾಗವಹಿಸಿದ್ದಾರೆ’ ಎಂದರು.

ವಿಮರ್ಶಕ ಡಾ.ಎಂ.ಜಿ.ಹೆಗಡೆ, ಸಾಹಿತಿ ದಿ.ಆರ್.ವಿ.ಭಂಡಾರಿ ಕುರಿತು ಮಾತನಾಡಿದರು.ನಿರ್ದೇಶಕ ಪ್ರಕಾಶ ಬಾಬು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಡಾ.ವಿಠ್ಠಲ ಭಂಡಾರಿ ಸ್ವಾಗತಿಸಿದರು. ಮಾನಸಾ ವಾಸರೆ ಪ್ರಾರ್ಥನಾ ಗೀತೆ ಹಾಡಿದರು. ‘ಚಿಂತನ’ದ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ ಭಟ್ ವಂದಿಸಿದರು.

ನಾಲ್ಕು ಸಂವಾದಗಳು

ಸಾಹಿತ್ಯೋತ್ಸವದಲ್ಲಿ ಒಟ್ಟು ನಾಲ್ಕು ಸಂವಾದಗಳನ್ನು ಏರ್ಪಡಿಸಲಾಗಿತ್ತು. ‘ಸೌಂದರ್ಯ ಮೀಮಾಂಸೆಯ ಅಭಿವ್ಯಕ್ತಿ’ ಕುರಿತು ನಿರ್ದೇಶಕ ಅಭಯ ಸಿಂಹ ವಿಚಾರ ಮಂಡಿಸಿದರು. ‘ಸಿನಿಮಾ ನೋಡುವ, ವಿಮರ್ಶಿಸುವ ಬಗೆ’ ಕುರಿತು ಗುಂಪು ಸಂವಾದವನ್ನು ಕತೆಗಾರ ಟಿ.ಕೆ.ದಯಾನಂದ ನಡೆಸಿಕೊಟ್ಟರು. ‘ಹೆಣ್ಣಿನ ನೆಲೆಯಲ್ಲಿ ಸಿನಿಮಾ’ ವಿಚಾರದಲ್ಲಿ ನಟಿ, ನಿರ್ದೇಶಕಿ ಅನನ್ಯಾಕಾಸರವಳ್ಳಿಮಾತನಾಡಿದರು. ‘ಡಿಜಿಟಲ್ ಸಿನಿಮಾ ವೇದಿಕೆಯ ಹೊಸ ಸಾಧ್ಯತೆಗಳು’ ಕುರಿತು ‘ಪ್ರಜಾವಾಣಿ’ಯ ದಾವಣಗೆರೆ ಬ್ಯುರೊ ಮುಖ್ಯಸ್ಥ ವಿಶಾಖ ಮಾತನಾಡಿದರು.

ಸಂವಾದದಲ್ಲಿದಲ್ಲಿ ಮೋಹನ ಹಬ್ಬು, ಹನುಮಂತ ಹಾಲಗೇರಿ, ಕಿರಣ ನಾಯ್ಕ,ಚಿನ್ಮಯ ಹೆಗಡೆ, ಗೋಪಾಲ ಹಳ್ಳೇರ, ಸಂತೋಷ ಸಂಕೊಳ್ಳಿ, ಯೋಗೀಶ ಬಂಕೇಶ್ವರ, ಎಂ.ಎಚ್.ಗಣೇಶ, ಗೋವರ್ಧನ್ ನವಿಲೇಹಾಳ, ಶಂಕರ ಕೆಂಚನೂರು, ಪ್ರಿಯಾಂಕ ಮಾವಿನಕರ, ತಿಮ್ಮಪ್ಪ ಗುಲ್ವಾಡಿ ಭಾಗವಹಿಸಿದ್ದರು.ಸಮಾರೋಪ ಸಮಾರಂಭದಲ್ಲಿ ಕವಯತ್ರಿವಿನಯಾ ಒಕ್ಕುಂದ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.