ಕಾರವಾರ: ಶಾಲೆ–ಕಾಲೇಜುಗಳ ಬಳಿ ತಂಬಾಕು ಉತ್ಪನ್ನ ಮಾರಾಟ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡದಂತೆ ಕಾನೂನಿದ್ದರೂ ಜಿಲ್ಲೆಯಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಹೆಚ್ಚಿದೆ.
ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಉತ್ಪನ್ನಗಳ ಸೇವನೆ ನಿಯಂತ್ರಿಸಲು ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ) ಜಾರಿಯಲ್ಲಿದೆ. ಕಾಯ್ದೆ ಅಡಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಮಿತಿಯನ್ನೂ ರಚಿಸಲಾಗಿದೆ. ಸಮಿತಿ ಸದಸ್ಯರು ಆಗಾಗ ದಾಳಿ ನಡೆಸಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದರೂ, ಸಂಪೂರ್ಣ ಕಡಿವಾಣ ಬಿದ್ದಿಲ್ಲ.
ಶಾಲೆ, ಕಾಲೇಜುಗಳ 100 ಮೀ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಡೆಸದಂತೆ ಕೋಟ್ಪಾ ಕಾಯ್ದೆ ಹೇಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಮಾರಾಟ ಮುಂದುವರೆದೇ ಇದೆ. ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಶಾಲೆಗಳ ಸಮೀಪದಲ್ಲಿ ಗೂಡಂಗಡಿಗಳಿದ್ದು, ಅಲ್ಲಿ ಗುಟ್ಕಾ, ಸಿಗರೇಟ್, ಬೀಡಿ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಕಿರಾಣಿ ಅಂಗಡಿ, ಬೀಡಾ ಅಂಗಡಿಗಳಲ್ಲಿಯೂ ಇದು ಮುಂದುವರಿದಿದೆ.
ಜಿಲ್ಲಾ ಕೇಂದ್ರದಲ್ಲಿರುವ ಹಲವು ಸರ್ಕಾರಿ ಕಚೇರಿಗಳ ಸಮೀಪದಲ್ಲೇ ತಂಬಾಕು ಉತ್ಪನ್ನಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ರಸ್ತೆಯ ಬದಿಯಲ್ಲೇ ನಿಂತು ಸಿಗರೇಟ್ ಸೇವನೆ ಮಾಡುವ ನೂರಾರು ಜನರು ನಗರದಲ್ಲಿ ನಿತ್ಯ ಕಾಣಸಿಗುತ್ತಾರೆ.
ಮುಂಡಗೋಡ ತಾಲ್ಲೂಕಿನಲ್ಲಿ ಶಾಲೆ, ಕಾಲೇಜುಗಳ ಸಮೀಪ ತಂಬಾಕು ಮುಕ್ತ ಪ್ರದೇಶ ಎಂದು ನಾಮಫಲಕ ಹಾಕಿರುವುದು ಕಂಡುಬರುತ್ತದೆ. ಆದರೆ, ಕೆಲವೆಡೆ ಶಾಲಾ, ಕಾಲೇಜುಗಳ ಸಮೀಪವೇ ಇರುವ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಹಿರಂಗ ಅಲ್ಲದಿದ್ದರೂ, ಕದ್ದುಮುಚ್ಚಿ ಮಾರುತ್ತಿರುವ ಆರೋಪ ಕೇಳಿಬರುತ್ತಿದೆ.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಅವುಗಳ ಮಾರಾಟದ ಬಗ್ಗೆ ಇರುವ ಶಾಸನಬದ್ಧ ಎಚ್ಚರಿಕೆಯ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ವಯಸ್ಕರಲ್ಲದವರಿಗೆ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳನ್ನು ನೀಡಬಾರದು ಎಂದು ಸಂಬಂಧಿಸಿದ ಅಧಿಕಾರಿಗಳು ಆಗಾಗ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ.
ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚಿನ ಎಲ್ಲ ಶಾಲೆಗಳ ಹತ್ತಿರದ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಡೆದೇ ಇದೆ. ತಂಬಾಕು ನಿಯಂತ್ರಣ ದಳದ ಅಧಿಕಾರಿಗಳು ಕಳೆದ ಹದಿನೈದು ದಿನಗಳ ಹಿಂದೆ ಪಟ್ಟಣದ ಸಬಗೇರಿ ಶಾಲೆಯ ಎದುರಿನ ಎಲ್‌ಎಸ್‌ಎಂಪಿ ಸಂಕೀರ್ಣದಲ್ಲಿರುವ ಗೂಡಂಗಡಿಯೊಂದರ ಮೇಲೆ ದಾಳಿ ನಡೆಸಿ ತಂಬಾಕು ಉತ್ಪನ್ನ ವಶಪಡಿಸಿಕೊಂಡಿದ್ದು ಅಂಗಡಿ ಸದ್ಯ ಮುಚ್ಚಿದೆ.
ಕುಮಟಾ ತಾಲ್ಲೂಕಿನಲ್ಲಿ ಶಾಲಾ-ಕಾಲೇಜುಗಳ ಆವರಣದಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮುಂದುವರಿದಿದೆ. ಅನೇಕ ಸಲ ತಂಬಾಕು ನಿಯಂತ್ರಣ ತಂಡ ಎಚ್ಚರಿಕೆಯನ್ನೂ ನೀಡಿದೆ. ಆದರೆ ಶಿಕ್ಷಣ ಸಂಸ್ಥೆಗಳ ಆವರಣದಿಂದ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳು ನೂರು ಮೀಟರ್ ಅಂತರದಲ್ಲಿ ಇವೆಯೇ? ಎನ್ನುವುದನ್ನು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಖಾತರಿಪಡಿಸಿಕೊಳ್ಳಬೇಕಿದೆ.
‘ಶಾಲಾ-ಕಾಲೇಜುಗಳ ಆವರಣದ ನೂರು ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಿದ್ದು ಕಂಡು ಬಂದರೆ ಅದನ್ನು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೇ ತಡೆಯುವ ಅಧಿಕಾರ ಹಾಗೂ ಜವಾಬ್ದಾರಿ ಹೊಂದಿದ್ದಾರೆ’ ಎಂಬುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ ಹೇಳುತ್ತಾರೆ.
ಗೋಕರ್ಣ ಪ್ರವಾಸೋದ್ಯಮದಲ್ಲಿ ಹೆಸರು ಮಾಡಿದ್ದರೂ ಇಲ್ಲಿನ ಶಾಲೆ, ಕಾಲೇಜುಗಳ ಬಳಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಿಲ್ಲ.
ಅಂಕೋಲಾ ತಾಲ್ಲೂಕಿನ ಕೆಲವು ಶಾಲೆಗಳ ಮುಂದೆ ಈಗಲೂ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ‘ಶಾಲೆಗಳ ಮುಂದೆ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದ್ದರೂ ಕೆಲವು ಕಡೆ ಅಂಗಡಿಕಾರರು ಮಾರಾಟ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂಬುದು ಸ್ಥಳೀಯರಾದ ಲೋಕೇಶ ನಾಯ್ಕ ದೂರುತ್ತಾರೆ.
ಪೂರಕ ಮಾಹಿತಿ: ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.
ಕೋಟ್ಪಾ ಕಾಯ್ದೆ ಅಡಿ ಜಿಲ್ಲೆಯಲ್ಲಿ ಕೈಗೊಳ್ಳಲಾದ ತಂಬಾಕು ದಾಳಿಯ ವಿವರ
ವರ್ಷ:ಪ್ರಕರಣ;ವಸೂಲಾದ ದಂಡ (ಮೊತ್ತ ₹ಗಳಲ್ಲಿ)
2019–20;1,454;1,56,080
2020–21;526;36,780
2021–22;841;62,820
2022–23;1,252;1,43,860
2023–24;954;1,48,290
2024–25 (ನ.30ರ ವರೆಗೆ);1,269;1,69,150
ಒಟ್ಟು;6,296;7,16,980
ಆಧಾರ: ಆರೋಗ್ಯ ಇಲಾಖೆ
ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ತಂಡ ಮತ್ತು ತಾಲ್ಲೂಕು ತಂಡವು ಆಗಾಗ ದಿಢೀರ್ ದಾಳಿ ನಡೆಸಿ ತಂಬಾಕು ಮಾರಾಟಗಾರರಿಗೆ ಎಚ್ಚರಿಸುತ್ತಿದೆ. ಜಿಲ್ಲೆಯಲ್ಲಿ ಈಗ ತಂಬಾಕು ಉತ್ಪನ್ನ ಮಾರಾಟ ಕಡಿಮೆ ಇದೆಡಾ.ಅರ್ಚನಾ ನಾಯ್ಕ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ
ಅಧಿಕಾರಿಗಳು ದಾಳಿ ನಡೆಸುವ ದಿನದಂದು ಬಹುತೇಕ ಪಾನ್ ಅಂಗಡಿ ಕಿರಾಣಿ ಅಂಗಡಿಗಳು ಕೆಲ ಹೊತ್ತು ಬಂದ್ ಆಗಿರುತ್ತವೆ. ಅಧಿಕಾರಿಗಳ ತಂಡ ಹೋದ ನಂತರ ಅಂಗಡಿಗಳು ತೆರೆದುಕೊಳ್ಳುತ್ತವೆಪರುಶುರಾಮ ಮುಂಡಗೋಡ ನಿವಾಸಿ
ಯಲ್ಲಾಪುರ ಪಟ್ಟಣದ ಸರ್ಕಾರಿ ಮಾದರಿ ಶಾಲೆಯಿಂದ 100 ಮೀಟರ್ ಒಳಗಡೆ 2 ಬಾರುಗಳು ಕಾರ್ಯನಿರ್ವಹಿಸುತ್ತಿವೆ. ಆಡಳಿತ ಈ ಕುರಿತು ಗಮನಹರಿಸಬೇಕುಮಹೇಶ ಮರಾಠೆ ಯಲ್ಲಾಪುರ ನಿವಾಸಿ
ಕಾಲೇಜು ಆವರಣದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನಾಮ ಫಲಕ ಅಳವಡಿಸಿದ್ದೇವೆಎನ್.ಕೆ. ನಾಯಕ ಡಾ.ಎ.ವಿ.ಬಿ ಕಲಾ-ವಿಜ್ಞಾನ ಕಾಲೇಜು ಪ್ರಾಚಾರ್ಯ
ಹೊನ್ನಾವರ ತಾಲ್ಲೂಕಿನಲ್ಲಿ ಸರಿಸುಮಾರು 50ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ಅನತಿ ದೂರದಲ್ಲೇ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ಅರೇಅಂಗಡಿ ಹಳದೀಪುರದಲ್ಲಿರುವ ಸಂಯುಕ್ತ ಪದವಿ ಪೂರ್ವ ಕಾಲೇಜುಗಳು ಕರ್ಕಿ ಜಲವಳಕರ್ಕಿ ಪ್ರೌಢಶಾಲೆ ಸೇರಿದಂತೆ ಗ್ರಾಮೀಣ ಭಾಗಗಳ ಸಮೀಪವೂ ತಂಬಾಕು ಉತ್ಪನ್ನ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪಟ್ಟಣದ ಕೆಲ ಶಾಲಾ-ಕಾಲೇಜುಗಳೂ ಇದಕ್ಕೆ ಹೊರತಾಗಿಲ್ಲ. ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ಮಾಡುತ್ತರಾದರೂ ಶಿಕ್ಷೆ ಕೇವಲ ದಂಡ ವಿಧಿಸುವುದಕ್ಕೆ ಸೀಮಿತವಾಗುತ್ತಿದೆ. ಪೊಲೀಸರು ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಕಾರರ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಲ್ಲಿದೆ. ‘ಶಿಕ್ಷಣ ಸಂಸ್ಥೆಗಳ ಸಮೀಪ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ಈ ವರ್ಷ5–6 ಬಾರಿ ದಾಳಿ ನಡೆಸಿ ದಂಡ ವಿಧಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ಮಾಡಿದರೆ ಅಕ್ರಮವನ್ನು ಹಿಮ್ಮೆಟ್ಟಿಸಬಹುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಹೇಳುತ್ತಾರೆ.
‘ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಲು ಕೋಟ್ಪಾ ಕಾಯ್ದೆ ಅಡಿ ನಿರಂತರ ಪ್ರಯತ್ನ ಸಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತಹಶೀಲ್ದಾರ್ ನೇತೃತ್ವದ ತಾಲ್ಲೂಕು ತಂಬಾಕು ನಿಯಂತ್ರಣ ಕೋಶದ ಮಾರ್ಗದರ್ಶನದೊಂದಿಗೆ ಪ್ರತಿ ತಿಂಗಳು ದಾಳಿ ನಡೆಸಿ ತಂಬಾಕು ಉತ್ಪನ್ನ ವಶಕ್ಕೆ ಪಡೆಯುವ ಜತೆಗೆ ವ್ಯಾಪಾರಿಗಳಿಗೆ ದಂಡ ವಿಧಿಸುವ ಕೆಲಸ ನಡೆದಿದೆ. ತಂಬಾಕು ಉತ್ಪನ್ನಗಳ ಮಾರಾಟ ತಡೆಗೆ ಜಾಗೃತಿ ಮೂಡಿಸುವ ಫಲಕಗಳನ್ನೂ ಅಂಗಡಿಕಾರರಿಗೆ ನೀಡಲಾಗುತ್ತಿದೆ. ಕಾಯ್ದೆ ಅನುಷ್ಠಾನದ ಜೊತೆಗೆ ಸಾರ್ವಜನಿಕರು ಸ್ವಯಂ ಜಾಗೃತರಾದರೆ ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಿಸಬಹುದು’ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರವೀಣ ನಾಯ್ಕ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.