ADVERTISEMENT

ಶಿರಸಿ: ಸಾಂಬಾರು ಮಂಡಳಿ ಕಚೇರಿ ನಿಷ್ಕ್ರಿಯ

ಕ್ಷೇತ್ರಾಧಿಕಾರಿ ಬಾಗಿಲು ತೆರೆವುದೇ ಅಪರೂಪ: ಸೌಲಭ್ಯಕ್ಕೆ ಹೊರ ಜಿಲ್ಲೆಗೆ ಅಲೆಯುವ ಸ್ಥಿತಿ

ರಾಜೇಂದ್ರ ಹೆಗಡೆ
Published 30 ಅಕ್ಟೋಬರ್ 2025, 3:59 IST
Last Updated 30 ಅಕ್ಟೋಬರ್ 2025, 3:59 IST
<div class="paragraphs"><p>ಶಿರಸಿಯಲ್ಲಿರುವ ಸಾಂಬಾರ ಮಂಡಳಿ ಕ್ಷೇತ್ರಾಧಿಕಾರಿ ಕಚೇರಿ ಬಾಗಿಲು ಹಾಕಿಕೊಂಡಿರುವುದು&nbsp;</p></div>

ಶಿರಸಿಯಲ್ಲಿರುವ ಸಾಂಬಾರ ಮಂಡಳಿ ಕ್ಷೇತ್ರಾಧಿಕಾರಿ ಕಚೇರಿ ಬಾಗಿಲು ಹಾಕಿಕೊಂಡಿರುವುದು 

   

ಶಿರಸಿ: ‘ಸಾಂಬಾರು ಮಂಡಳಿಯಿಂದ ರಿಯಾಯಿತಿ ದರದಲ್ಲಿ ನೀಡುವ ಸಸಿಗಳನ್ನು ತರುವುದಾದರೆ ದೂರದ ಶಿವಮೊಗ್ಗ ಇಲ್ಲವೇ ಚಿಕ್ಕಮಂಗಳೂರು ಹೋಗಬೇಕು. ಸಾಂಬಾರ ಬೆಳೆಗಳ ಕ್ಷೇತ್ರ ವಿಸ್ತರಣೆ, ಸಸಿ ವಿತರಣೆ, ಸಂಶೋಧನೆಗೆ ಉತ್ತೇಜನ ನೀಡಬೇಕಿದ್ದ ಸಾಂಬಾರ ಮಂಡಳಿಯ ಜಿಲ್ಲಾ ಕ್ಷೇತ್ರಾಧಿಕಾರಿ ಕಚೇರಿ ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತಿದೆ’.

ಇದು ಸಾಂಬಾರು ಪದಾರ್ಥಗಳನ್ನು ಬೆಳೆಯುತ್ತಿರುವ ಜಿಲ್ಲೆಯ ಹಲವು ರೈತರ ದೂರು. ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಸಾಂಬಾರ ಪದಾರ್ಥಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ, ಅನುಷ್ಠಾನದ ಜತೆ ಬೆಳೆ ವಿಸ್ತರಣೆಗೆ ಉತ್ತೇಜನ ನೀಡಬೇಕಿರುವ ಸಾಂಬಾರ ಮಂಡಳಿಯ ಜಿಲ್ಲಾಮಟ್ಟದ ಕ್ಷೇತ್ರಾಧಿಕಾರಿ ಕಚೇರಿ ಬಹುತೇಕ ದಿನ ಬಾಗಿಲು ಮುಚ್ಚಿಕೊಂಡೇ ಇರುತ್ತಿದೆ.

ADVERTISEMENT

‘ಹಾವೇರಿ ಕಚೇರಿಯ ಕ್ಷೇತ್ರಾಧಿಕಾರಿಯೇ ಶಿರಸಿ ಕಚೇರಿ ಜವಾಬ್ದಾರಿ ನಿಭಾಯಿಸುತ್ತಿದ್ದು, ಹೆಚ್ಚುವರಿ ಜವಾಬ್ದಾರಿ ಹೊಂದಿದ್ದಾರೆ. ಇದರಿಂದ ಕಚೇರಿ ವಾರದಲ್ಲಿ ಒಮ್ಮೆ ಬಾಗಿಲು ತೆರೆದರೆ ಹೆಚ್ಚು. ಅಧಿಕಾರಿ ಶಿರಸಿಗೆ ಬಂದರೆ ಹಾವೇರಿ ಕಚೇರಿ ಬಂದ್ ಮಾಡಬೇಕಾಗುತ್ತದೆ ಎಂಬ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದು, ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬರುವ ರೈತರು ಮುಚ್ಚಿದ ಬಾಗಿಲು ನೋಡಿ ಮರಳುತ್ತಿದ್ದಾರೆ’ ಎನ್ನುತ್ತಾರೆ ಪ್ರಗತಿಪರ ಕೃಷಿಕ ನಾರಾಯಣ ಹೆಗಡೆ.

‘ಈ ಮೊದಲು ಸಾಂಬಾರ ಬೆಳೆಗಳ ಪ್ರದೇಶದಲ್ಲಿ ಮರುನಾಟಿಗೆ ರೈತರಿಗೆ ಸಹಾಯಧನ ನೀಡಲಾಗುತ್ತಿತ್ತು. ಈಚಿನ ವರ್ಷದಲ್ಲಿ ಅನುದಾನ ಬಿಡುಗಡೆಯಾದ ಬಗ್ಗೆ ಮಾಹಿತಿ ಇಲ್ಲ. ಮಂಡಳಿ ಕಚೇರಿಯಿಂದ ಸಸಿಗಳು ಲಭ್ಯವಿವೆ ಎಂಬ ಪ್ರಕಟಣೆ ನೀಡಲಾಗುತ್ತದೆ. ಆದರೆ ಸ್ಥಳೀಯವಾಗಿ ಯಾವುದೇ ಸಸಿಗಳು ಲಭ್ಯವಿರುವುದಿಲ್ಲ. ಶಿವಮೊಗ್ಗ ಇಲ್ಲವೇ ಚಿಕ್ಕಮಗಳೂರಿನ ನರ್ಸರಿಗೆ ಹೋಗಿ ಸಸಿ ತರಬೇಕಿದೆ. ಹಾಗೆ ಮಾಡುವುದರಿಂದ ರಿಯಾಯತಿ ಮೊತ್ತ ವಾಹನ ಬಾಡಿಗೆಗೆ ಸಮವಾಗುತ್ತದೆ’ ಎಂದರು.

ಅನುದಾನ ಕೊರತೆ

‘ಜಿಲ್ಲೆಯ ಮೆಣಸು, ಏಲಕ್ಕಿ, ಇತ್ಯಾದಿ ಬೆಳೆಗಾರರನ್ನು ಉತ್ತೇಜಿಸುವುದು ಸಾಂಬಾರ ಮಂಡಳಿಯ ಉದ್ದೇಶವಾಗಿತ್ತು. ಆದರೆ ಕ್ಷೇತ್ರಾಧಿಕಾರಿ ಕಚೇರಿಗೆ ಅಗತ್ಯದಷ್ಟು ಅನುದಾನ ಸಿಗುತ್ತಿಲ್ಲ. ಖಾಲಿಯಿರುವ ಹುದ್ದೆಗಳ ನೇಮಕವೂ ಆಗುತ್ತಿಲ್ಲ. ಪರಿಣಾಮ ಅನುದಾನದ ಕೊರತೆಯಿಂದಾಗಿ ಮಂಡಳಿಯು ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದೆ ನಿಷ್ಕ್ರಿಯವಾಗಿದೆ’ ಎಂದು ರೈತ ಶ್ರೀಕಾಂತ ಹೆಗಡೆ ದೂರಿದರು.

ಕಚೇರಿ ಹೊರಗಡೆ ದೂರವಾಣಿ ಸಂಖ್ಯೆ ನಮೂದಿಸಿದ್ದು, ಅಗತ್ಯ ಇರುವವರು ಅದರ ಮೂಲಕ ನನ್ನನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು
ಬಾಪು ಗೌಡ ಸಾಂಬಾರು ಮಂಡಳಿಯ ಕ್ಷೇತ್ರಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.