
ಮುಂಡಗೋಡ: ‘ನೆರೆಯ ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ಭೀಕರ ಪರಿಸ್ಥಿತಿಯ ಬಗ್ಗೆ ಭಾರತೀಯರಲ್ಲಿ ಸೈಕಲ್ ಪೆಡಲಿಂಗ್ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಟಿಬೆಟ್‌ನಲ್ಲಿ ಸ್ವಾತಂತ್ರ್ಯದ ಪುನರುಜ್ಜೀವನಕ್ಕಾಗಿ ನಾನು ಹಾಗೂ ಟಿಬೆಟ್ ಬೆಂಬಲಿಸುವ ಭಾರತೀಯರು ಧ್ವನಿ ಎತ್ತುತ್ತಿದ್ದೇವೆ’ ಎಂದು ಟಿಬೆಟನ್ ಕಾಸ್ ಇಂಡಿಯಾದ ಕೋರ್ ಗ್ರೂಪ್ ಪ್ರಾದೇಶಿಕ ಸಂಚಾಲಕ ಸಂದೇಶ ಮೆಶ್ರಮ್ ಹೇಳಿದರು.
ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ನ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿ ಗುರುವಾರ ದಲೈಲಾಮಾ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕಳೆದ ಡಿ.9ರಂದು ಅರುಣಾಚಲ ಪ್ರದೇಶದ ಬುಮ್ಲಾದಿಂದ(ಟಿಬೆಟ್ ಗಡಿ) ಆರು ಮಂದಿ ಜಾಗರಣ ಸೈಕಲ್ ಯಾತ್ರೆ ಕೈಗೊಂಡಿದ್ದು, ಫೆ.9ರಂದು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಕೊನೆಗೊಳ್ಳಲಿದೆ. ಸುಮಾರು 2604ಕಿ.ಮೀ ಈ ಯಾತ್ರೆ ಸಾಗುತ್ತಿದ್ದು, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ಈ ಮೂರು ರಾಜ್ಯಗಳಲ್ಲಿ ಸೈಕಲ್ ಯಾತ್ರೆ ಸಂಚರಿಸಲಿದೆ. ʼಸ್ವಾತಂತ್ರ್ಯಕ್ಕಾಗಿ ಪಾದಯಾತ್ರೆ, ಟಿಬೆಟ್‌ಗಾಗಿ ಭಾಷಣʼ ಯಾತ್ರೆಯ ಧ್ಯೇಯವಾಗಿದೆ ಎಂದರು.
2014, 2016, 2017, 2020 ಮತ್ತು 2021ರಲ್ಲಿ ಒಟ್ಟು ಐದು ಜನಜಾಗರಣ ಸೈಕಲ್ ಯಾತ್ರೆಗಳನ್ನು ನಡೆಸಲಾಗಿದೆ. ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಮತ್ತು ಕೇರಳ ಸೇರಿದಂತೆ ಒಟ್ಟು ಹತ್ತು ರಾಜ್ಯಗಳಲ್ಲಿ ಸುಮಾರು 18ಸಾವಿರ ಕಿಮೀ ಪೆಡಲ್ ಮಾಡಿದ್ದೇನೆ. ಧರ್ಮಶಾಲಾದಿಂದ ರಾಜ್ಯದ ಮುಂಡಗೋಡವರೆಗೆ 7500ಕಿಮೀ ಪೆಡಲಿಂಗ್ ಮಾಡಿದ ನಂತರ ಆರೋಗ್ಯ ಹದಗೆಟ್ಟಿತು. ಈ ಕಾರಣದಿಂದ 4ನೇ ಯಾತ್ರೆಯು ಎರಡು ಹಂತಗಳಲ್ಲಿ ಪೂರ್ಣಗೊಂಡಿತು ಎಂದರು.
ʼಸೈಕಲ್ ಯಾತ್ರೆ ಮೂಲಕ ಪ್ರತಿ ವರ್ಷ ಟಿಬೆಟನ್ ಜನರ ಪರವಾಗಿ ಹಾಗೂ ಟಿಬೆಟ್ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತುತ್ತಿರುವ ಟಿಬೆಟನ್ ಕಾಸ್ ಇಂಡಿಯಾದ ಕೋರ್ ಗ್ರೂಫ್ ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆʼ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.