ADVERTISEMENT

ಉತ್ತರ ಕನ್ನಡ | ಸಂಜಯ ದತ್ತಾ ನಾಯಕ ಜಿಲ್ಲೆಗೆ ಪ್ರಥಮ

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಗೆ ‘ಎ’ ಗ್ರೇಡ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 15:03 IST
Last Updated 10 ಆಗಸ್ಟ್ 2020, 15:03 IST

ಕಾರವಾರ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯು ‘ಎ’ ಗ್ರೇಡ್ ದಾಖಲಿಸಿದೆ. ಕುಮಟಾ ತಾಲ್ಲೂಕಿನ ಕೊಲೋಬಾ ವಿಠೋಬಾ ಶಾನಭಾಗ ಕಲಭಾಗಕರ್ ಪ್ರೌಢಶಾಲೆಯ ವಿದ್ಯಾರ್ಥಿ ಸಂಜಯ ದತ್ತಾ ನಾಯಕ 625ಕ್ಕೆ 623 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 186 ಶಾಲೆಗಳಲ್ಲಿ 95 ‘ಎ’ ಗ್ರೇಡ್ ಪಡೆದುಕೊಂಡಿವೆ. ಅವುಗಳಲ್ಲಿ 29 ಸರ್ಕಾರಿ, 34 ಅನುದಾನಿತ ಹಾಗೂ 32 ಅನುದಾನ ರಹಿತ ಪ್ರೌಢಶಾಲೆಗಳು ಸೇರಿವೆ. ‘ಬಿ’ ಗ್ರೇಡ್ ಪಡೆದಿರುವ 63 ಶಾಲೆಗಳ ಪೈಕಿ 19 ಸರ್ಕಾರಿ, 36 ಅನುದಾನಿತ ಮತ್ತು ಎಂಟು ಅನುದಾನ ರಹಿತ ಪ್ರೌಢಶಾಲೆಗಳಿವೆ. 28 ‘ಸಿ’ ಗ್ರೇಡ್ ಗಳಿಸಿದ್ದು, ಐದು ಸರ್ಕಾರಿ, 19 ಅನುದಾನಿತ ಹಾಗೂ ನಾಲ್ಕು ಅನುದಾನ ರಹಿತ ಶಾಲೆಗಳು ಒಳಗೊಂಡಿವೆ.

ರಾಜ್ಯದಲ್ಲಿ ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ಜಿಲ್ಲೆಯು ಶೇ 88.12ರಷ್ಟು ಫಲಿತಾಂಶ ದಾಖಲಿಸಿತ್ತು. ಈ ಬಾರಿ ಫಲಿತಾಂಶದ ಮಾದರಿಯನ್ನು ಶಿಕ್ಷಣ ಇಲಾಖೆಯು ಮಾರ್ಪಾಟು ಮಾಡಿದ್ದು, ಗ್ರೇಡ್ ಪದ್ಧತಿಯನ್ನು ಜಾರಿ ಮಾಡಿದೆ. ಆದ್ದರಿಂದ ಈ ಪಟ್ಟಿಯ ಪ್ರಕಾರ ಜಿಲ್ಲೆಯು 10ನೇ ಕ್ರಮಸಂಖ್ಯೆಯಲ್ಲಿದೆ.

ADVERTISEMENT

ಪರೀಕ್ಷೆ ಬರೆದರೂ ಶೂನ್ಯ ಅಂಕ!:

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರೂ ಕೆಲವು ವಿದ್ಯಾರ್ಥಿಗಳ ಫಲಿತಾಂಶದ ಮಾಹಿತಿಯಲ್ಲಿ ‘ಶೂನ್ಯ’ ಎಂದು ಪ್ರಕಟವಾಗಿದೆ. ಇದು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಗೊಂದಲ ಉಂಟು ಮಾಡಿದೆ.

ಕಾರವಾರ ತಾಲ್ಲೂಕಿನ ಬಾಳ್ನಿ, ಉಳಗಾದ ಕೆಲವು ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನೀಡಲಾಗಿದೆ. ಆದರೆ, ಅದೇ ವಿಷಯದಲ್ಲಿ ಬರೆದ ಪರೀಕ್ಷೆಗೆ ಶೂನ್ಯ ಅಂಕ ನಮೂದಿಸಲಾಗಿದೆ. ಕನ್ನಡ, ಹಿಂದಿ ಹಾಗೂ ವಿಜ್ಞಾನ ವಿಷಯಗಳಲ್ಲಿ ಈ ರೀತಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್, ಈ ವಿಷಯವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.