ADVERTISEMENT

ಸಂಕ್ರಾಂತಿ: ಶಿರಸಿಯ ಸಹಸ್ರಲಿಂಗದಲ್ಲಿ ಭಕ್ತರ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 5:03 IST
Last Updated 15 ಜನವರಿ 2026, 5:03 IST
ಸಂಕ್ರಾಂತಿ ನಿಮಿತ್ತ ಶಿರಸಿಯ ಸಹಸ್ರಲಿಂಗದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು
ಸಂಕ್ರಾಂತಿ ನಿಮಿತ್ತ ಶಿರಸಿಯ ಸಹಸ್ರಲಿಂಗದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು   

ಶಿರಸಿ: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ತಾಲ್ಲೂಕಿನ ಪ್ರಸಿದ್ಧ ಶಿವತಾಣವಾದ ಸಹಸ್ರಲಿಂಗದಲ್ಲಿ ಸಾವಿರಾರು ಭಕ್ತರು ಶಾಲ್ಮಲಾ ನದಿಯಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಭಕ್ತಿಭಾವ ಮೆರೆದರು.

ಬೆಳಿಗ್ಗೆಯಿಂದಲೇ ನದಿತೀರಕ್ಕೆ ಆಗಮಿಸಿದ ಅಸಂಖ್ಯ ಭಕ್ತರು, ನೀರಿನಲ್ಲಿ ಮಿಂದೆದ್ದು ನದಿಯೊಳಗಿನ ಶಿವಲಿಂಗಗಳಿಗೆ ವಿಶೇಷ ಪೂಜೆ ಹಾಗೂ ಅರ್ಘ್ಯ ಸಮರ್ಪಿಸಿದರು. ಮಧ್ಯಾಹ್ನದವರೆಗೂ ಇಲ್ಲಿ ಜನಜಂಗುಳಿ ಕಂಡುಬಂದಿದ್ದು, ಹಬ್ಬದ ಕಳೆ ಮನೆಮಾಡಿತ್ತು. ನದಿಯಲ್ಲಿ ಸ್ನಾನ ಮಾಡುವ ವೇಳೆ ಉಂಟಾಗಬಹುದಾದ ಅಪಾಯಗಳನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಭಕ್ತರ ಸುರಕ್ಷತೆಗಾಗಿ ಸನ್ನದ್ಧರಾಗಿದ್ದರು. ಕೇವಲ ಸ್ಥಳೀಯರಲ್ಲದೆ, ನೆರೆಯ ಹಾವೇರಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದಲೂ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.

ನಗರದ ಮಾರಿಕಾಂಬಾ ದೇವಸ್ಥಾನದಲ್ಲೂ ಭಕ್ತರ ದಂಡು ಹರಿದುಬಂದಿತ್ತು. ಹೊರ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ದೇವಿಯ ದರ್ಶನ ಪಡೆದರು. ದೇವಸ್ಥಾನದ ಮುಂಭಾಗದಲ್ಲಿ ಸರತಿ ಸಾಲು ಕಂಡುಬಂದಿದ್ದು, ಭಕ್ತರು ಶಿಸ್ತುಬದ್ಧವಾಗಿ ನಿಂತು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ADVERTISEMENT

ಇದಲ್ಲದೆ, ತಾಲ್ಲೂಕಿನ ಹಳ್ಳಿಕೊಪ್ಪದ ಮೋರಿ ಭೂತೇಶ್ವರ ದೇವರ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು. ಹಳ್ಳಿಕಾನಿನಲ್ಲಿ ಸಂಕ್ರಾಂತಿ ನಿಮಿತ್ತ ನಡೆದ ವಾರ್ಷಿಕ ಸಮಾರಾಧನೆಯಲ್ಲಿ ನೂರಾರು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಶಿಗೇಹಳ್ಳಿಯ ಚನ್ನಕೇಶ್ವರ ದೇವಾಲಯ, ಬನವಾಸಿ ಹಾಗೂ ಗುಡ್ನಾಪುರದ ದೇವಸ್ಥಾನಗಳಲ್ಲಿಯೂ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.