ADVERTISEMENT

ಪರೇಶ ಮೇಸ್ತ ಸಾವು ಪ್ರಕರಣ: ಮೊದಲ ಇಬ್ಬರು ಆರೋಪಿಗಳು ಯಾರು?- ಸೈಲ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 14:26 IST
Last Updated 1 ಅಕ್ಟೋಬರ್ 2022, 14:26 IST
ಸತೀಶ ಸೈಲ್
ಸತೀಶ ಸೈಲ್   

ಕಾರವಾರ: ‘ಪರೇಶ ಮೇಸ್ತ ಸಾವು ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರನೇ ಆರೋಪಿ ಎಂದು ಬಿ.ಜೆ.ಪಿ ವಕ್ತಾರ ನಾಗರಾಜ ನಾಯಕ ಹೇಳಿರುವುದು ಹಾಸ್ಯಾಸ್ಪದ. ಅವರು ಮಾಡಿರುವ ಆರೋಪಕ್ಕೆ ಯಾವುದೇ ಬೆಲೆಯಿಲ್ಲ’ ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಇಬ್ಬರು ಆರೋಪಿಗಳು ಯಾರು ಎಂಬುದನ್ನು ಅವರು ಸ್ಪಷ್ಟಪಡಿಸಲಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಪರೇಶನ ಸಾವು ಪ್ರಕರಣದ ತನಿಖೆಯನ್ನು ಸಿ.ಬಿ.ಐಗೆ ಹಸ್ತಾಂತರಿಸಿದರು’ ಎಂದರು.

‘ಮಣಿಪಾಲದ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ, ನೀರಿನಲ್ಲಿ ಮುಳುಗಿದ್ದರಿಂದ ಸಾವು ಸಂಭವಿಸಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಈ ಪ್ರಕರಣ ನಡೆದು ಐದು ವರ್ಷಗಳಾದವು. ಆದರೆ, ತನಿಖೆಯನ್ನು ಇನ್ನೂ ಯಾಕೆ ಎಳೆಯುತ್ತಿದ್ದಾರೆ? ಪ್ರಕರಣವನ್ನು ರಾಜಕೀಯಗೊಳಿಸಲಾಗಿದೆ. ಇದನ್ನು ಕೊಲೆಯೆಂದು ಸಾಬೀತು ಮಾಡಲಿ. ನಿಜವಾಗಿಯೂ ಹತ್ಯೆಯಾಗಿದ್ದರೆ ಹೋರಾಟಕ್ಕೆ ನಾವೂ ಸಿದ್ಧರಿದ್ದೇವೆ’ ಎಂದು ಹೇಳಿದರು.

ADVERTISEMENT

‘ಬಿ.ಜೆ.ಪಿ ಸಾಧನೆಯೇನಿಲ್ಲ’:

‘ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಬಿ.ಜೆ.ಪಿ.ಯವರು ಒಂದೂ ಹೊಸ ಯೋಜನೆ ತಂದಿಲ್ಲ. ನನ್ನ ಅವಧಿಯಲ್ಲಿ ಮಂಜೂರಾದ ಸೇತುವೆಗಳನ್ನು, ತಮ್ಮ ಸಾಧನೆ ಎನ್ನುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ನಮ್ಮ ಗೆಲುವು ಖಚಿತ’ ಎಂದು ಸತೀಶ ಸೈಲ್ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಸಮಿತಿ ವಕ್ತಾರ ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಪ್ರಮುಖರಾದ ರವೀಂದ್ರ ಅಮದಳ್ಳಿ, ಜಿ.ಪಿ.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.