ADVERTISEMENT

ಮೀಸಲಾತಿ ಹೆಚ್ಚಳದ ನಿರ್ಧಾರದಿಂದ ಕಾಂಗ್ರೆಸ್‌ಗೆ ಆತಂಕ: ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 3:05 IST
Last Updated 12 ಅಕ್ಟೋಬರ್ 2022, 3:05 IST
ಸಚಿವ ಸುಧಾಕರ್ ಭಟ್ಕಳದ ಸರ್ಕಾರಿ  ಆಸ್ಪತ್ರೆಗೆ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ ಇದ್ದಾರೆ.
ಸಚಿವ ಸುಧಾಕರ್ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ ಇದ್ದಾರೆ.   

ಭಟ್ಕಳ: 'ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ರಚನೆ ಮಾಡಿದ್ದು ಕುಮಾರಸ್ವಾಮಿ ಸರ್ಕಾರ. ಸಮಿತಿ ರಚನೆಯಾಗಿ ಆರು ತಿಂಗಳಿನಲ್ಲಿ ಅವರ ಸರ್ಕಾರ ಪತನವಾದ ನಂತರ ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಸಮಿತಿಗೆ ಇನ್ನಷ್ಟು ಕಾಲಾವಕಾಶ ನೀಡಿ ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು.

ಅವರು ಮಂಗಳವಾರ ರಾತ್ರಿ ಭಟ್ಕಳದಲ್ಲಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ನಾಗಮೋಹನ ದಾಸ್ ಸಮಿತಿ ರಚನೆ ಮಾಡಿದ್ದು ಕಾಂಗ್ರೆಸ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು.

'ಯಡಿಯೂರಪ್ಪ ಸರ್ಕಾರ ಸಮಾಜದಲ್ಲಿ ದುರ್ಬಲ ಹಾಗೂ ಬಲಹೀನ ವರ್ಗದವರಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ನಾಗಮೋಹನದಾಸ್ ಸಮಿತಿಗೆ ಕಾಲಾವಕಾಶ ನೀಡಿತ್ತು. ಎರಡು ವರ್ಷಗಳ ಬಳಿಕ ಅವರು ನೀಡಿದ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯಾಯಮೂರ್ತಿ ಸುಭಾಷ ಅಡಿ ನೇತೃತ್ವದ ಸಮಿತಿ ಮೂಲಕ ಪರಿಶೀಲನೆ ನಡೆಸಿದರು. ಅಂತಿಮವಾಗಿ ಸಚಿವ ಸಂಪುಟದ ಸಭೆ ಸೇರಿ ತೀರ್ಮಾನ ಮಾಡಲಾಯಿತು' ಎಂದರು.

ADVERTISEMENT

'50 ವರ್ಷಗಳಿಂದ ಶೋಷಿತ ಹಾಗೂ ಬಲಹೀನ ಸಮಾಜವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್‌ನವರು, ಅವರ ಮತ ಬಲವಂತವಾಗಿ ಕಸಿದುಕೊಂಡು ಅವರಿಗಾಗಿ ಏನೂ ಮಾಡಿಲ್ಲ. ನಮ್ಮ‌ ಸರ್ಕಾರದಿಂದ ಈ ನಿರ್ಧಾರದಿಂದ ಬಲಹೀನ ವರ್ಗದವರು ಬಿ.ಜೆ.ಪಿ.ಗೆ ಕಡೆಗೆ ವಾಲುವುದನ್ನು ನೋಡಿ ಕಾಂಗ್ರೆಸ್‌ನವರು ಹೆದರಿದ್ದಾರೆ' ಎಂದರು.

ಕರ್ನಾಟಕದಲ್ಲಿ ಮೀಸಲಾತಿ ಶೇ 56 ದಾಟಿದೆ‌ ಎನ್ನುವ ವಿರೋಧಪಕ್ಷದ ನಾಯಕರ‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 'ತಮಿಳುನಾಡಿನಲ್ಲಿ ಅದು ಶೇ 67ರಷ್ಟಿದೆ. ನಮಗೂ ಅದರ ಬಗ್ಗೆ ತಿಳಿದಿದೆ. ಶೆಡ್ಯೂಲ್ 9ರಲ್ಲಿ ಮಾರ್ಪಾಡು ಮಾಡಿ ಸದನದಲ್ಲಿ ತಂದು ಕೇಂದ್ರಕ್ಕೆ ಮನವಿ ಮಾಡಲಾಗುವುದು' ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಭಟ್ಕಳ ಶಾಸಕ ಸುನೀಲ‌ ನಾಯ್ಕ, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.